ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದೆ.
ಸಂತೋಷ್ ರಾವ್ ದೋಷ ಮುಕ್ತ ಎಂದು ಆದೇಶ ಹೊರಡಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಸಂತೋಷ್ ಸಿ.ಬಿ ಆದೇಶವನ್ನು ನೀಡಿದ್ದಾರೆ. 11 ವರ್ಷಗಳ ಹಿಂದೆ ಸೌಜನ್ಯ ಧರ್ಮಸ್ಥಳದಲ್ಲಿ ಭೀಕರವಾಗಿ ಅತ್ಯಾಚಾರಕ್ಕೆ ಈಡಾಗಿದ್ದಳು. ಈಕೆಯನ್ನು ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿತ್ತು.
ಏನಿದು ಪ್ರಕರಣ?
ಸೌಜನ್ಯ..ಈ ಹೆಸರು ಜಗತ್ತಿನಿಂದ ಕಣ್ಮರೆಯಾಗಿ 11 ವರ್ಷವಾಗಿದೆ. ಅಂದು 2012 ಅಕ್ಟೋಬರ್ 10. ಎಂದಿನಂತೆ ಬೆಳಗ್ಗೆ ಬೇಗ ಎದ್ದು ಸೌಜನ್ಯ ಕಾಲೇಜಿಗೆ ಹೊರಡಲು ಅಣಿಯಾಗಿದ್ದಳು. ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ನಗು-ನಗುತ್ತಾ ಸೌಜನ್ಯ ಕಾಲೇಜಿನತ್ತ ಹೊರಟಿದ್ದಳು.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಪಾಂಗಾಳದ ಚಂದಪ್ಪ ಗೌಡ-ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯಲ್ಲಿರುವ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಸಂಜೆ ತನಕ ಕಾಲೇಜು ಮುಗಿಸಿ ಉಜಿರೆಯಿಂದ ಮರಳಿ ಮನೆಯತ್ತ ಸೌಜನ್ಯ ಹೊರಟಿದ್ದಳು. ಹಾಗೆ ಹೊರಟವಳನ್ನು ಆಕೆಯ ಸ್ನೇಹಿತರು ನೋಡಿದ್ದಾರೆ. ನಗುನಗುತ್ತಾ ‘ಬಾಯ್ ಕಣೆ ಸೌಜನ್ಯ’ ಎಂದು ಬೀಳ್ಕೊಟ್ಟಿದ್ದಾರೆ. ಹಾಗೆ ಬಸ್ ಏರಿ ಮನೆಯತ್ತ ಹೊರಟ ಸೌಜನ್ಯ ಧರ್ಮಸ್ಥಳ ದೇವಸ್ಥಾನದ ಅಣತಿ ದೂರದಲ್ಲಿರುವ ನೇತ್ರಾವತಿ ಸ್ನಾನಘಟ್ಟದ ಬಳಿ ಇಳಿದಿದ್ದಾಳೆ. ಆಕೆ ಇಳಿದದ್ದನ್ನು ಬಸ್ನಲ್ಲಿದ್ದ ಪರಿಚಯಸ್ಥರೂ ನೋಡಿದ್ದಾರೆ. ಅಲ್ಲಿಂದ ಮುಂದೆ ನಡೆದದ್ದೆಲ್ಲವೂ ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿದೆ. ಹಲವಾರು ನಿಗೂಢಗಳ ನಡುವೆ ಸೌಜನ್ಯ ಭೀಕರ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ಅತ್ಯಾಚಾರದ ವೇಳೆ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಲಾಗಿತ್ತು. ಚಿತ್ರ ಹಿಂಸೆ ಮಾಡಲಾಗಿತ್ತು. ಅಮಾನುಷ ಕೃತ್ಯ ಎಸಗಲಾಗಿತ್ತು ಅನ್ನುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗಗೊಂಡಿತ್ತು.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಣ್ಣ ಸಂಖ ಎಂಬಲ್ಲಿ 2012 ಅಕ್ಟೋಬರ್ 10ರಂದು ರಾತ್ರಿ ಸೌಜನ್ಯಳ ಮೃತ ದೇಹ ಪತ್ತೆಯಾಗಿತ್ತು. ಪೊಲೀಸರು ರೇಪ್ ಅಂಡ್ ಮರ್ಡರ್ ಕೇಸ್ ದಾಖಲಿಸಿದ್ರು. ಇದಾದ ಮರುದಿನ ಅಂದ್ರೆ 11-10-2012 ರಂದು ಕಾರ್ಕಳ ಮೂಲದ ಕಾರ್ಮಿಕ ಸಂತೋಷ್ ರಾವ್ (38) ಎಂಬಾತನನ್ನು ಬಂಧಿಸಲಾಗಿತ್ತು. ಧರ್ಮಸ್ಥಳದ ಬಾಹುಬಲಿ ಬೆಟ್ಟದಿಂದ ಈತನನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣವನ್ನು ಮೊದಲು ಸಿಐಡಿಗೆ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಕೊಲೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ. ನಿಜವಾದ ಅಪರಾಧಿಗಳು ತಲೆ ಮರೆಸಿಕೊಂಡಿದ್ದಾರೆ. ನಿರಪರಾಧಿಯನ್ನು ಅಪರಾಧಿ ಎಂದು ಸಮಾಜಕ್ಕೆ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ, ಉಜಿರೆ, ಕೊಕ್ಕಡ ಸೇರಿದಂತೆ ವಿವಿಧ ಭಾಗದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಆರೋಪಿಗಳನ್ನು ಬಂಧಿಸಿ ಸೌಜನ್ಯ ಸಾವಿಗೆ ನ್ಯಾಯ ದೊರಕಲೇ ಬೇಕು ಅನ್ನುವ ಒತ್ತಾಯ ಕೇಳಿ ಬಂದಿತ್ತು. ಈ ಒತ್ತಡಕ್ಕೆ ಮಣಿದ ಅಂದಿನ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇದೆಲ್ಲದರ ನಡುವೆ ಹನ್ನೊಂದು ವರ್ಷದ ಬಳಿಕ ಮುಂಬರುವ ಜೂನ್ 16 ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಎಲ್ಲರ ಚಿತ್ತವೂ ತೀರ್ಪಿನತ್ತವೇ ನೆಟ್ಟಿದೆ. ಸಿಬಿಐ ತನಿಖೆ ನಡೆದ ಹೊರತಾಗಿಯೂ ಇನ್ನೂ ಹಲವಾರು ಪ್ರಶ್ನೆಗಳು ಹಾಗೆಯೆ ಬಾಕಿ ಉಳಿದುಕೊಂಡಿದೆ. ಆ ಎಲ್ಲ ಪ್ರಶ್ನೆಗಳ ಬಗೆಗಿನ ಉತ್ತರ ಹುಡುಕುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ನಾವು ಮಾಡಿದ್ದೇವೆ. ಇನ್ನೂ ಸಿಗದ ಉತ್ತರ ಹಾಗೂ ಕೊಲೆಯ ಸುತ್ತಮುತ್ತ ಇರುವ ಅನುಮಾನಗಳ ಬಗ್ಗೆ ಹೇಳ್ತಾ ಹೋಗ್ತಿವಿ ನೋಡಿ..
ಸಿಗದ ಉತ್ತರ- 1
ಯಶೋಧ (ಸೌಜನ್ಯರ ಅತ್ತೆ) ಅನ್ನುವ ಮಹಿಳೆಯ ಸಾಕ್ಷಿಯನ್ನು ೩ನೇ ಸಾಕ್ಷಿದಾರರಾಗಿ ಪರಿಗಣಿಸಲಾಗಿತ್ತು.
ಆಕೆ ಹೇಳಿರುವ ಪ್ರಕಾರ ಅಕ್ಟೋಬರ್ 9, 2012ರಂದು ಮೂವರು ವ್ಯಕ್ತಿಗಳು ಮಾತನಾಡುತ್ತ ನಿಂತಿದ್ದದ್ದು ಗಮನಕ್ಕೆ ತಂದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿಲ್ಲ ಎನ್ನಲಾಗುತ್ತಿದೆ.
ಸಿಗದ ಉತ್ತರ- 2
ಪ್ರಕರಣದ 1ನೇ ಸಾಕ್ಷಿ ಸೌಜನ್ಯ ತಂದೆ ನ್ಯಾಯಾಲಯದ ಎದುರು ನೀಡಿರುವ ಹೇಳಿಕೆ ಪ್ರಕಾರ, ಕೊಲೆಯಾದ ಸೌಜನ್ಯ ಒಳ ಉಡುಪನ್ನು ಪೊಲೀಸರು ಘಟನಾ ಸ್ಥಳದಲ್ಲಿ ವಶಕ್ಕೆ ಪಡೆದಿದ್ದಲ್ಲ, ಬದಲಾಗಿ ಮನೆಯಿಂದ ತೆಗೆದುಕೊಂಡು ಹೋಗಿದ್ದರು ಎಂದು ತಿಳಿಸಿದ್ದಾರೆ. ಅತ್ಯಾಚಾರದಂತಹ ಪ್ರಕರಣ ನಡೆದಾಗ, ಅತ್ಯಾಚಾರಕ್ಕೆ ಒಳಗಾದ ಯುವತಿಯ ಒಳ ಉಡುಪು ಘಟನಾ ಸ್ಥಳದಿಂದ ವಶಕ್ಕೆ ಪಡೆಯುವ ಬದಲು, ಮನೆಯಿಂದ ತೆಗೆದುಕೊಂಡು ಹೋಗಿ, ಸಾಕ್ಷಿಗಳ ಪಟ್ಟಿಗೆ ಸೇರಿಸಿರುವುದು ಸಹಜವಾಗಿಯೇ ಅನುಮಾನ ಮೂಡಿಸುತ್ತಿದೆ.
ಸಿಗದ ಉತ್ತರ- 3
ಘಟನೆಯಲ್ಲಿ ಉಡುಪಿ ಮೂಲದ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಮಲ್ಲಿಕ್ ಜೈನ್, ಆಶ್ರಿತ್ ಜೈನ್, ಶಿವಪ್ಪ ಮಲೆಕುಡಿಯ, ರವಿ ಪೂಜಾರಿ, ಗೋಪಾಲ ಕೃಷ್ಣ ಗೌಡ ಎಂಬುವವರು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿ ಅನುಮಾನದ ಮೇಲೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು ಎಂದು ತನಿಖಾ ವರದಿಗಳು ಹೇಳುತ್ತಿವೆ. ಆದರೆ, ಸಂತೋಷ್ ಮೇಲೆ ಯಾಕೆ ಅನುಮಾನ ಬಂತು? ಅಂತಾಗಲೀ ಅಥವಾ ಆತನೇ ಅತ್ಯಾಚಾರ ಎಸಗಿ ಸೌಜನ್ಯಳನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದ್ದು ಹೇಗೆ ಅಂತಾಗಲೀ? ಎಲ್ಲಿಯೂ ಹೇಳಿಕೆಗಳು ದಾಖಲಾಗಿಲ್ಲ. ಇನ್ನೂ ವಿಶೇಷ ಏನೆಂದರೆ, ಸಂತೋಷ್ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಮಯದಲ್ಲಿ ಜತೆಗಿದ್ದ ರವಿ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವು, ಕೊಲೆ ಇರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬ, ಗೋಪಾಲ ಕೃಷ್ಣ ಗೌಡ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವನ್ನು ತನಿಖಾಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ.
ಸಿಗದ ಉತ್ತರ- 4
ಪ್ರಕರಣದಲ್ಲಿ ಸೌಜನ್ಯಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಮುಖ್ಯ ವೈದ್ಯಾಧಿಕಾರಿ ‘ಸೌಜನ್ಯಳ ಮೇಲೆ ಭೀಕರವಾಗಿ ಅತ್ಯಾಚಾರ ನಡೆದಿದೆ’ ಎಂದು ಹೇಳಿಕೆ ನೀಡಿದ್ದರು. ಇನ್ನೊಂದೆಡೆ, ಮಂಗಳೂರಿನ ಆಸ್ಪತ್ರೆಯೊಂದರ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಆರೋಪಿ ಸಂತೋಷ್ ರಾವ್ ‘ಫಿಮಾಸಿಸ್’ ಕಾಯಿಲೆಯಿಂದ ನರಳುತ್ತಿದ್ದ ಎಂದು ದಾಖಲಿಸಿದ್ದಾರೆ. ಫಿಮಾಸಿಸ್ ಎಂದರೆ, ಪುರುಷರ ಜನನಾಂಗಕ್ಕೆ ಮುಂದಿನ ಚರ್ಮ ಅಂಟಿಕೊಂಡಿರುವುದು. ಇದು ಲೈಂಗಿಕ ಚಟುವಟಿಕೆ ಸಮಯದಲ್ಲಿ ಹಿಂದಕ್ಕೆ ಹೋಗದಂತೆ ತಡೆ ಹಿಡಿದಿರುತ್ತದೆ. ಈ ಎರಡೂ ಹೇಳಿಕೆಗಳ ಜತೆಗೆ, ಸಂತೋಷ್ ರಾವ್ನನ್ನು ಪರೀಕ್ಷಿಸಿದ ವೈದ್ಯರು ಆತನ ಜನನಾಂಗದಲ್ಲಿ ಯಾವುದೇ ಗಾಯಗಳಾಗಿರಲಿಲ್ಲ ಎಂದೂ ಹೇಳಿದ್ದಾರೆ. ಒಂದು ಕಡೆ ಸೌಜನ್ಯ ಮೇಲೆ ಭೀಕರವಾದ ಅತ್ಯಾಚಾರ ಎಸಗಲಾಗಿದೆ, ಮತ್ತೊಂದೆಡೆ ಫಿಮಾಸಿಸ್ನಿಂದ ಬಳಲುತ್ತಿದ್ದ ಆರೋಪಿಯ ಜನನಾಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಇಂತಹ ವೈರುಧ್ಯ ಸಹಜವಾಗಿ ಅನುಮಾನ ಮೂಡಿಸುತ್ತಿದೆ.
ಸಿಗದ ಉತ್ತರ- 5
ವೈದ್ಯಕೀಯ ವರದಿಯಲ್ಲಿ ಕೊಲೆಯಾದ ಸೌಜನ್ಯಳ ದೇಹದಲ್ಲಿ ಜೀರ್ಣವಾಗದೇ ಉಳಿದ ಆಹಾರ ಇತ್ತು ಎಂಬುದನ್ನು ದಾಖಲಿಸಿದ್ದಾರೆ. ಅದು ಸಂಜೆ 6 ಗಂಟೆ ಸುಮಾರಿಗೆ ಸೇವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಆಕೆಯ ಸಾವು ಮಧ್ಯರಾತ್ರಿ 12ರ ಸುಮಾರಿಗೆ ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಆಕೆ ನಾಪತ್ತೆಯಾದ ದಿನ ಸೌಜನ್ಯ ಮನೆಯಲ್ಲಿ ಪೂಜೆ ಇಟ್ಟುಕೊಳ್ಳಲಾಗಿತ್ತು. ಹೀಗಾಗಿ ಆಕೆ ಸಂಜೆವರೆಗೂ ಯಾವುದೇ ಆಹಾರ ತೆಗೆದುಕೊಂಡಿರಲಿಲ್ಲ ಎಂದು ಆಕೆಯ ಜತೆಗಿದ್ದ ಸಾಕ್ಷಿಗಳು ಹೇಳಿಕೆ ನೀಡಿವೆ. ಸೌಜನ್ಯ ಕಾಲೇಜಿನಿಂದ ಮನೆಗೆ ಹೋಗಲು ಬಸ್ ಇಳಿದ ನಂತರ ಆಕೆ ಆಹಾರವನ್ನು ಸೇವಿಸಿರಬೇಕು. ಅದೂ ಆಕೆಯ ಮೇಲೆ ಬಲತ್ಕಾರ ನಡೆಯುವ ಮುನ್ನ ಎಂಬುದನ್ನು ವೈದ್ಯಕೀಯ ವರದಿಗಳು ಹೇಳುತ್ತಿವೆ. ಅಂದರೆ, ಆಕೆಯ ಮೇಲೆ ಮೇಲೆ ಅತ್ಯಾಚಾರ ಎಸಗುವ ಮುನ್ನವೇ ಒತ್ತಾಯ ಪೂರ್ವಕವಾಗಿ ಆಹಾರವನ್ನು ನೀಡಿರುವ ಸಾಧ್ಯತೆ ಇದೆ. ಇದು ಒಬ್ಬರಿಂದ ನಡೆದ ಕೃತ್ಯ ಎಂದು ಹೇಳುತ್ತಿರುವ ತನಿಖಾ ವರದಿ ಸಹಜವಾಗಿಯೇ ಅನುಮಾನ ಮೂಡಿಸುತ್ತಿದೆ.
ಸಿಗದ ಉತ್ತರ- 6
ಆರೋಪಿ ಸಂತೋಷ್ ರಾವ್ ಪೊಲೀಸರ ವಶಕ್ಕೆ ಸಿಗುವ ವಾರದ ಹಿಂದಷ್ಟೆ ಶೃಂಗೇರಿಯ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ಆತ ಧರ್ಮಸ್ಥಳಕ್ಕೆ ಬಂದಿದ್ದ ಎನ್ನುತ್ತವೆ ಸಿಬಿಐ ಕಲೆ ಹಾಕಿರುವ ಸಾಕ್ಷಿಗಳು. ಆತನಿಂದ 3 ಶರ್ಟ್, 1 ಬನಿಯನ್, 1 ಪಂಚೆ ಮತ್ತು 1 ಒಳ ಉಡುಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ಪರೀಕ್ಷಾ ವರದಿಗಳಲ್ಲಿ ಇವ್ಯಾವುದರ ಮೇಲೆಯೂ ಒಂದೇ ಒಂದು ರಕ್ತದ ಕಲೆಯಾಗಲೀ, ಡಿಎನ್ಎ ಮಾರ್ಕಿಂಗ್ಗಳಾಗಿ ಕಂಡು ಬಂದಿಲ್ಲ.
ಸಿಗದ ಉತ್ತರ- 7
ಇನ್ನು, ಡಿಎನ್ಎ ತಜ್ಷ ವಿನೋದ್ ಕೆ. ಲಕ್ಕಪ್ಪ ನೀಡಿರುವ ಹೇಳಿಕೆಯಲ್ಲಿ ಆರೋಪಿ ಸಂತೋಷ್ ಪಂಚೆಯಲ್ಲಿ ಕೂದಲುಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ವಿಶೇಷ ಅಂದರೆ, ಈ ಕೂದಲುಗಳು ಇಬ್ಬರು ಪ್ರತ್ಯೇಕ ಪುರುಷರಿಗೆ ಸೇರಿದ್ದು ಎಂದು ಅವರು ಗುರುತಿಸಿದ್ದಾರೆ. ಸೌಜನ್ಯ ಉಗುರುಗಳಲ್ಲಿ ಸಿಕ್ಕಿರುವ ಡಿಎನ್ಎಗೂ ಸಂತೋಷ್ಗೂ ಯಾವುದೇ ಸಾಮ್ಯತೆ ಇಲ್ಲ.
ಸಿಗದ ಉತ್ತರ- 8
ಕೊಲೆಯಾದ ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಂದ ಬಲತ್ಕಾರ ನಡೆದಿರಬಹುದು ಎಂದು ಶಂಕಿಸಲಾಗಿದೆ. ವೈದ್ಯಾಧಿಕಾರಿಗಳು ಕೂಡ ಇದನ್ನೇ ಪುಷ್ಠೀಕರಿಸಿದ್ದಾರೆ.
ಸಿಗದ ಉತ್ತರ- 9
ಸೌಜನ್ಯಳ ಮೃತ ದೇಹ ಸಿಕ್ಕ ನೇತ್ರಾವತಿ ಸ್ನಾನಘಟ್ಟದ ಬಳಿಯಿರುವ ಮಣ್ಣಸಂಕದಿಂದ ಸುಮಾರು 50 ಅಡಿ ದೂರದಲ್ಲಿ ಆರೋಪಿ ಸಂತೋಷ್ ರಾವ್ಗೆ ಸಂಬಂಧಪಟ್ಟ ವಸ್ತುಗಳನ್ನು (ಬಟ್ಟೆಗಳನ್ನು) ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರ ದಾಖಲೆಗಳು ಹೇಳುತ್ತಿವೆ. ಆದರೆ ಅವುಗಳಲ್ಲಿ ಯಾವುದೇ ಕುರುಹು, ಸಾಕ್ಷಿಗಳು ಸಿಗಲಿಲ್ಲ ಎಂಬುದು ಗಮನಿಸಬೇಕಿರುವ ಅಂಶ.
ಸಿಗದ ಉತ್ತರ- 10
ಇಡೀ ಪ್ರಕರಣವನ್ನು ಗಮನಿಸಿದರೆ ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತ ದೇಹ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕು ಎಂದರೆ ನೀರಿನ ತೊರೆಯನ್ನು ಹಾಯಬೇಕಿದೆ. ಆರೋಪಿ ಒಬ್ಬನೇ ಆಕೆಯನ್ನು ನೀರಿನ ತೊರೆಯನ್ನು ಹಾದು ಸಾಗಿಸುವುದು ಕಷ್ಟ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಿಗದ ಉತ್ತರ- 11
ಸೌಜನ್ಯ ನಾಪತ್ತೆಯಾದ ದಿನ ಧರ್ಮಸ್ಥಳದ ಸುತ್ತ ಮುತ್ತ ಮಳೆ ಬಂದಿತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿ ದಾಖಲಾಗಿದೆ. ಆದರೆ ಕೊಲೆಯಾದ ಸೌಜನ್ಯಳ ಬಟ್ಟೆಯಾಗಲೀ, ಆಕೆಯ ಕಾಲೇಜಿನ ಬ್ಯಾಗ್ ಆಗಲಿ ಒದ್ದೆಯಾಗಿಲ್ಲ ಅಥವಾ ಕೆಸರಿನಿಂದ ಮೆತ್ತಿಕೊಂಡಿಲ್ಲ. ಅಂದ್ರೆ ಆಕೆಯ ಮೇಲೆ ಅತ್ಯಾಚಾರ ನಡೆದ ಸ್ಥಳ ಮತ್ತು ಕೊಲೆಯಾದ ಸ್ಥಳ ಮೃತ ದೇಹ ಪತ್ತೆಯಾದ ಸ್ಥಳವಾಗಿರಲು ಸಾಧ್ಯವಿಲ್ಲ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ.