ನ್ಯೂಸ್ ನಾಟೌಟ್: ದಾನಗಳಲ್ಲೇ ಶ್ರೇಷ್ಠ ದಾನ ‘ರಕ್ತ ದಾನ’. ರಕ್ತಕ್ಕೆ ಜಾತಿ ಧರ್ಮದ ಭೇದವಿಲ್ಲ. ಜೀವ ಉಳಿಸೋ ಸಂದರ್ಭದಲ್ಲಿ ರಕ್ತವೇ ಮೊದಲು. ದಾನಿಯೇ ದೇವರು. ಪ್ರತಿ ದಿನ ವಿಶ್ವದಾದ್ಯಂತ ಅಂತಹ ಪುಣ್ಯ ಕಾರ್ಯದಲ್ಲಿ ಹಲವಾರು ಮಂದಿ ಪಾಲ್ಗೊಳ್ಳುತ್ತಾರೆ. ಇಂತಹ ದಾನಿಗಳನ್ನು ಸ್ಮರಿಸುವುದಕ್ಕೆ ಪ್ರತಿ ವರ್ಷ ಜೂ. 14 ರಂದು ವಿಶ್ವ ರಕ್ತ ದಾನಿಗಳ ದಿನ ಎಂದು ಆಚರಿಸಲಾಗುತ್ತದೆ. ಇದೇ ರೀತಿಯಾಗಿ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಕೆವಿಜಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮೆಡಿಕಲ್ ಕಾಲೇಜಿನಲ್ಲಿಯೂ ಬೃಹತ್ ವಿಶ್ವ ರಕ್ತ ದಾನಿಗಳ ದಿನವನ್ನು ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ ಅವರು, “ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದು. ಇಂತಹ ಪುಣ್ಯದ ಕೆಲಸಕ್ಕೆ ಹಾಗೂ ಮಹತ್ವದ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಜೂ. 14 ರಂದು ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ತಪ್ಪದೆ ರಕ್ತದಾನವನ್ನು ಮಾಡಿ ಅಪಾಯದಲ್ಲಿರುವ ಜೀವಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ, ಕೆ.ವಿ.ಜಿ. ಕಾನೂನು ಕಾಲೇಜು, ಯೂತ್ ರೆಡ್ ಕ್ರಾಸ್ ವಿಂಗ್, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಇಂದು ‘ವಿಶ್ವ ರಕ್ತ ದಾನಿಗಳ ದಿನ’ದ ಪ್ರಯುಕ್ತ ‘ರಕ್ತದಾನ ಶಿಬಿರ’ವು ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪೆಥಾಲಜಿ ವಿಭಾಗದ ಪ್ರೊಫೆಸರ್ ಡಾ. ನವ್ಯ ಬಿ.ಎನ್, ರಕ್ತದಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ವಿವರಿಸಿದರು. ಈ ಸಂದರ್ಭ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಪ್ರೊಫೆಸರ್ ಡಾ. ರಾಜೇಶ್, ಡಾ. ಜಗದೀಶ್, ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಡಾ. ಪ್ರಮೋದ್ ಪಿ.ಎ, ಕೆ.ವಿ.ಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ, ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಉಪಸ್ಥಿತರಿದ್ದರು. ಪೆಥಾಲಜಿ ವಿಭಾಗ ಮುಖ್ಯಸ್ಥೆ ಡಾ. ಸತ್ಯವತಿ ಆರ್ ಆಳ್ವ ಸ್ವಾಗತಿಸಿದರು.ಡಾ. ನಿಕ್ಷಯ್ ಪ್ರಾರ್ಥಿಸಿದರು.ಅಸಿಸ್ಟೆಂಟ್ ಪ್ರೊಫೆಸರ್ ಡಾ. ಅಂಜಲಿ ರಾವ್ ಕಾರ್ಯಕ್ರಮ ನಿರೂಪಿಸಿದರು. ಪೆಥಾಲಜಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ವಿನಿತಾ ಎ ವಂದಿಸಿದರು.