ನ್ಯೂಸ್ ನಾಟೌಟ್: ಮುಸ್ಲಿಂ ವ್ಯಕ್ತಿಯೊಬ್ಬರು ಚೌಡೇಶ್ವರಿ ದೇಗುಲ ಕಟ್ಟಿಕೊಡುವ ಮೂಲಕ ಕೋಲಾರದಲ್ಲಿ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಕನಸಲ್ಲಿ ಚೌಡೇಶ್ವರಿ ದೇವರು ಬಂದು, ದೇಗುಲ ಕಟ್ಟಿಸು ಎಂದು ಸೂಚನೆ ನೀಡಿದ್ದರು ಎನ್ನುವ ಕಾರಣಕ್ಕೆ ಮೊಹಮ್ಮದ್ ಶಫಿ ಎಂಬ ಮುಸ್ಲಿಂ ವ್ಯಕ್ತಿ ಚೌಡೇಶ್ವರಿ ಅಮ್ಮನವರ ದೇಗುಲ ಕಟ್ಟಿಸಿದ್ದಾರೆ.
ಇಂತಹ ಅಪರೂಪದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ. ಚೌಡೇಶ್ವರಿ ಅಮ್ಮನವರ ದೇಗುಲ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಕೋಡಿಮಠದ ಶ್ರೀಗಳು ದೇಗುಲ ಲೋಕಾರ್ಪಣೆ ಮಾಡಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ದೇಗುಲ ನಿರ್ಮಾಣಕ್ಕೂ ಮುನ್ನ 4 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಹುತ್ತವಿತ್ತು. ಮೂಲತಃ ಅಂಚೆ ಇಲಾಖೆಯಲ್ಲಿ ಕೆಲಸ ಮಾಡ್ತಿರುವ ಮೊಹಮ್ಮದ್ ಶಪಿ ಅವರಿಗೆ, ದೇವರು ಕನಸಲ್ಲಿ ಇದೇ ಸ್ಥಳದಲ್ಲಿ ದೇಗುಲ ಕಟ್ಟಿಸುವಂತೆ ಸೂಚನೆ ನೀಡಿದ್ದರಂತೆ. ಅದರಂತೆ ಕೋಡಿಮಠದ ಶ್ರೀಗಳನ್ನ ಭೇಟಿಯಾಗಿದ್ದ ಮೊಹಮ್ಮದ್ ಶಪಿ, ಸಲಹೆ ಸೂಚನೆಗಳನ್ನು ಪಡೆದುಕೊಂಡು, ಸ್ವಾಮೀಜಿ ವಿಜಯೇಂದ್ರರೊಂದಿಗೆ ಸೇರಿ ದೇಣಿಗೆ ಸಂಗ್ರಹಿಸಿದ್ದಾರೆ. ಜೊತೆಗೆ ತಮ್ಮ ಸ್ವಂತ ಹಣವನ್ನು ಹೂಡಿ ಭವ್ಯವಾದ ಚೌಡೇಶ್ವರಿ ದೇಗುಲ ನಿರ್ಮಿಸಿದ್ದಾರೆ. ಈ ಕುರಿತು ಮಾತನಾಡಿದ ಮೊಹಮ್ಮದ್ ಶಪಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಮುಸ್ಲಿಮರು, ಅಲ್ಲಾನನ್ನು ಹೊರತುಪಡಿಸಿ ಬೇರೆ ಯಾರನ್ನು ಪೂಜೆ ಮಾಡಲ್ಲ, ಈ ಮಧ್ಯೆ ಮೊಹಮ್ಮದ್ ಶಫಿ ಅವರ ಕಾರ್ಯ, ಕೋಮು ಸೌಹಾರ್ದತೆ ತೋರಿಸುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.