ನ್ಯೂಸ್ ನಾಟೌಟ್: ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಡೆಂಗಿ ಜ್ವರದ ಪ್ರಕರಣಗಳು ಹೆಚ್ಚುತ್ತಿದೆ. ಪ್ರಸಕ್ತ ವರ್ಷದಲ್ಲಿ 31 ಮಂದಿಯಲ್ಲಿ ಡೆಂಗಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ನೀರು ನಿಲ್ಲುತ್ತಿದ್ದು ರೋಗ ಮತ್ತಷ್ಟು ಉಲ್ಬಣವಾಗುವ ಆತಂಕವಿದೆ. ಜನವರಿಯಿಂದ ಮಾರ್ಚ್ವರೆಗೆ ಜಿಲ್ಲೆಯಲ್ಲಿ ಕೇವಲ 13 ಮಂದಿಯಲ್ಲಷ್ಟೇ ಡೆಂಗಿ ಪತ್ತೆಯಾಗಿತ್ತು. ಆದರೆ, ಮೇ ನಂತರ ಇಲ್ಲಿಯವರೆಗೆ ಕೇವಲ ಒಂದೂವರೆ ತಿಂಗಳಲ್ಲಿ 18 ಪ್ರಕರಣಗಳು ಕಂಡು ಬಂದಿವೆ. ಮತ್ತೆ ಜೂನ್ ತಿಂಗಳಿನಲ್ಲಿ ಡೆಂಗಿ ಪತ್ತೆ ಪ್ರಕರಣಗಳು ಮುಂದುವರಿಯುತ್ತಿವೆ.
ಜೂನ್ ತಿಂಗಳಿನಲ್ಲಿ ಮುಂಗಾರು ಬಂದರೂ ಮಳೆ ತೀವ್ರ ಸ್ವರೂಪ ಪಡೆದಿಲ್ಲ. ಇನ್ನೂ ಜಿಟಿಜಿಟಿಯಾಗಿಯೇ ಮಳೆ ಸುರಿಯುತ್ತಿದೆ. ಕೆಲವೆಡೆ ಹಗುರ ಮಳೆಯಾಗುತ್ತಿದೆ. ನಿಂತ ನೀರನ್ನು ಕೊಚ್ಚಿಕೊಂಡು ಹೋಗುವಷ್ಟು ಮಳೆ ಬಿರುಸು ಪಡೆದಿಲ್ಲ. ಇದರಿಂದ ಗುಂಡಿಗಳಲ್ಲಿ ನಿಂತಿರುವ ನೀರು ಮತ್ತಷ್ಟು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಹೀಗಾಗಿ, ಡೆಂಗಿ ಕಡಿಮೆಯಾಗುವುದು ಸದ್ಯಕ್ಕೆ ಸಾಧ್ಯವಿಲ್ಲದಂತಹ ಸ್ಥಿತಿ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
- +91 73497 60202
- [email protected]
- November 23, 2024 12:37 AM