ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಭಾರಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿ ಯಲ್ಲಿ ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬನ ಫೋಟೋವನ್ನು ಹಾಕಿ ಅರೆಸ್ಟ್ ಆಗಿದ್ದಾನೆ. ಹಿಂದೂ ಸಂಘಟನೆ ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯಾದ್ಯಂತ ಇತ್ತೀಚೆಗೆ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತಿವೆ. ಟಿಪ್ಪು ಸುಲ್ತಾನ್ ಹಾಗೂ ಔರಂಗ್ಜೇಬ್ನ ವೈಭವೀಕರಣ ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಮೊಬೈಲ್ ಸರ್ವೀಸ್ ಪ್ರವೈಡರ್ ಆಗಿದ್ದ ಎಂದು ತಿಳಿದುಬಂದಿದೆ. ಬಂಧನಕ್ಕೂ ಮೊದಲು ಈತನಿಗೆ ಪೊಲೀಸರು ನೋಟಿಸ್ ನೀಡಿದ್ದರು ಎನ್ನಲಾಗಿದೆ. ಔರಂಗಜೇಬನ ಫೋಟೋವನ್ನು ಹಾಕಿಕೊಂಡಿರೋದನ್ನು ಹಿಂದೂ ಸಂಘಟನೆ ಗಮನಿಸಿ, ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ಲಿಖಿತ ದೂರು ನೀಡಿತ್ತು. ಅದರಂತೆ ಪೊಲೀಸರು, ಬಂಧಿತನ ವಿರುದ್ಧ ಐಪಿಸಿ ಸೆಕ್ಷನ್ 298, 153-A ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.