ನ್ಯೂಸ್ ನಾಟೌಟ್ : ಸುಳ್ಯದ ಅಮರಶಿಲ್ಪಿ, ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಕುರುಂಜಿ ವೆಂಕಟರಮಣ ಗೌಡರ ಹೆಸರಿನಲ್ಲಿ ಕೊಡಮಾಡುವ ‘ಡಾ. ಕೆ.ವಿ.ಜಿ. ಸ್ಕಾಲರ್ಶಿಪ್ ‘ ಆರಂಭಿಸಲಾಗಿದ್ದು ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆವಿಜಿ ಕಾಲೇಜ್ ಆಫ್ ಇಂಜಿನೀಯರಿಂಗ್ನ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಅವರು ತಂದೆಯ ಸ್ಮರಣಾರ್ಥ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಲಿಕೆಗೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಸ್ಕಾಲರ್ಶಿಪ್ ನೀಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್ಲೈನ್ ಮುಖಾಂತರ ಜೂ. 10ರಂದು ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರಾಜ್ಯದ ಹಲವು ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಒಟ್ಟು 2356 ವಿದ್ಯಾರ್ಥಿಗಳು ಬರೆದಿದ್ದರು. ಪರೀಕ್ಷೆ ಬರೆದ ಅರ್ಹ ವಿದ್ಯಾರ್ಥಿಗಳು ಕಾಲೇಜಿನ ವಿವಿಧ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ಸಂದರ್ಭ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಈ ಉದ್ದೇಶಕ್ಕಾಗಿ ಪ್ರತಿವರ್ಷ 47.4 ಲಕ್ಷ ರೂ. ವೆಚ್ಚ ವಹಿಸಲಿದೆ.
ಪರೀಕ್ಷೆಯ ಫಲಿತಾಂಶವನ್ನು ಜೂ. 20ರಂದು www.kvgceexam.com ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9845866528 ಸಂಖ್ಯೆ ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.