ನ್ಯೂಸ್ ನಾಟೌಟ್ : ತಾಯಿ ಸೇರಿದಂತೆ ತನ್ನ ನಾಲ್ಕು ಮಕ್ಕಳ ಜೊತೆ ಪುಟ್ಟ ವಿಮಾನದಲ್ಲಿ ಹೋಗುತ್ತಿದ್ದ ವೇಳೆ ವಿಮಾನ ಪತನಗೊಂಡು ಕೊಲಂಬಿಯಾ ದೇಶದ ಅಮೆಝಾನ್ ಕಾಡಿನಲ್ಲಿ ಉದುರಿ ಬೀಳುತ್ತದೆ. ಕಾಣೆಯಾದ ವಿಮಾನ ಹುಡುಕುತ್ತಾ ಅಮೆಝಾನ್ ಕಾಡಿಗೆ ಹೋದ ಕೊಲಂಬಿಯಾದ ಮಿಲಿಟರಿಯವರಿಗೆ ಅಪಘಾತದಲ್ಲಿ ಬರೋಬ್ಬರಿ ೪೦ ದಿನಗಳ ಬಳಿಕ ೪ ಮಕ್ಕಳು ಜೀವಂತವಾಗಿ ಸಿಕ್ಕಿದ್ದಾರೆ!!
ಹೌದು,ಕೊಲಂಬಿಯಾದ ಸೇನಾಪಡೆಯೇ ಈ ವಿಷಯವನ್ನು ತಿಳಿಸಿದೆ.ಮೇ 1 ರಂದು 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್ನ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಘಟನೆಯ ಬಳಿಕ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.ಅಪಘಾತವಾಗಿ 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನವನ್ನು ಕಂಡುಹಿಡಿಯಲಾಗಿದ್ದು, ಮೂವರು ವಯಸ್ಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳ ಪತ್ತೆ ಮಾತ್ರ ಆಗಿರಲಿಲ್ಲ.
ನಾಪತ್ತೆಯಾಗಿದ್ದವರಲ್ಲಿ ಒಡಹುಟ್ಟಿದ 13, 9, 4 ವರ್ಷ ಹಾಗೂ 11 ತಿಂಗಳ ಮಕ್ಕಳು ಸೇರಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದವು.ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆ ಹೆಚ್ಚಾಗಿತ್ತು.ಹಸಿವಿನಿಂದ ಅವರು ಸಾಯಬಾರದು ಎಂಬ ಕಾರಣಕ್ಕೆ ಆಹಾರ, ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು. 40 ದಿನಗಳ ಬಳಿಕ ಕೊನೆಗೂ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ.ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ ನಾಯಿ ಸೇರಿದಂತೆ 150 ಸೈನಿಕರು ಹುಡುಕಾಟ ನಡೆಸಿದರು.ಬದುಕುಳಿದಿರೋ ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಧ್ವನಿ ಸುರುಳಿಗಳನ್ನು ಪ್ರಸಾರ ಮಾಡಲಾಗಿತ್ತು.ಈ ಸಂದರ್ಭ ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂಸೇವಕರೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು.
ಮೂಲಗಳ ಪ್ರಕಾರ ಮಕ್ಕಳು ಹುಟಿಟೋ ಕಮ್ಯುನಿಟಿಗೆ ಸೇರಿದವರೆಂದು ಹೇಳಲಾಗುತ್ತಿದೆ.ಈ ಜನರಿಗೆ ಕಾಡೆಂದರೆ ಕ್ಯಾರೇ ಇಲ್ಲ ಎಂಬ ಮಾಹಿತಿ. ಹೀಗಾಗಿ ಮಕ್ಕಳು ಕಾಡಿಗೆ,ಅದರ ಸವಾಲಿಗೆ ಜಗ್ಗುವುದಿಲ್ಲ ಎಂಬುದು ಮಿಲಿಟರಿಯ ವಿಶ್ವಾಸ.ಮಕ್ಕಳ ಅಜ್ಜಿಯ ಧ್ವನಿ ದಾಖಲಿಸಿ, ಮಕ್ಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ ಎನ್ನುವ ಕೂಗನ್ನು ದೊಡ್ಡದಾಗಿ ಕಾಡೊಳಗೆ ಹರಿಯಬಿಡುತ್ತಾರೆ. ಹೀಗೆ ದಿನಗಳು ಉರುಳುತ್ತಾ ಹೋಯಿತು.ನಲುವತ್ತು ದಿನಗಳಾದವು.ಇಂದು ಆ ನಾಲ್ಕೂ ಮಕ್ಕಳು ಅಮೆಝಾನ್ ಎಂಬ ದಟ್ಟಡವಿಯೊಳಗೆ ಪತ್ತೆಯಾಗಿದ್ದಾರೆ. ಮಕ್ಕಳ ಜೊತೆ ಇರುವ ಫೋಟೋಗಳನ್ನು ಮಿಲಿಟರಿ ಪ್ರಕಟಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ, ಇದೊಂದು ಅಪರೂಪದ ಹಾಗೂ ವಿಸ್ಮಯದ ಘಟನೆ. 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿ ಬಚಾವ್ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಮಕ್ಕಳು ಧೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡುಹಿಡಿದಿರುವುದನ್ನು ಇತಿಹಾಸ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಹೇಳಿದ್ದಾರೆ.