ನ್ಯೂಸ್ ನಾಟೌಟ್: ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ, ಅಂತಹ ಬಾಡಿಗೆ ಭಾಷಣಕಾರರು ಬರೆದಿದ್ದನ್ನೆಲ್ಲ ನಮ್ಮ ಮಕ್ಕಳು ಓದಿದರೆ ಅವರ ಭವಿಷ್ಯ ಏನಾಗಬೇಕು. ಹಾಗಾಗಿ ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸಿರುವ ಅವರು ಬರೆದಿರುವ ಪಠ್ಯ ವಿಷಯವನ್ನು ತೆಗೆದು ಹಾಕುತ್ತೇವೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಯಾರು, ಅವರು ಯಾವ ಪಿಎಚ್ಡಿ ಮಾಡಿದ್ದಾರೆ? ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಭಗತ್ ಸಿಂಗ್ , ಸುಖ್ದೇವ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪಾಠ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಭಗತ್ ಸಿಂಗ್ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ನಿಜವಾದ ಇತಿಹಾಸ ನಾವು ಹೇಳ್ತಿವಿ. ನಾನು ನಾಸ್ತಿಕ ಏಕೆ ಆದೆ? ಎಂಬ ಭಗತ್ ಸಿಂಗ್ ಅವರ ಪುಸ್ತಕ ಇದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಒಮ್ಮೆ ಓದಲಿ. ಇತಿಹಾಸವನ್ನು ತಿರುಚದೇ ಪಾಠಗಳನ್ನು ನಾವು ಪಠ್ಯದಲ್ಲಿ ಅಳವಡಿಸುತ್ತೇವೆ ಎಂದರು.