ನ್ಯೂಸ್ ನಾಟೌಟ್: ಮೂರು ದಶಕಗಳಿಂದ ಕ್ಷೀರ ಕ್ರಾಂತಿಯನ್ನು ಮಾಡಿ ಪುತ್ತೂರಿನಲ್ಲಿ ಜನಮನ್ನಣೆಗೆ ಪಾತ್ರವಾಗಿದ್ದ ಪುತ್ತೂರಿನ ಜಿಡೆಕಲ್ಲಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಹಾಲು ಸಹಕಾರಿ ಒಕ್ಕೂಟದ ಹಾಲು ಶೀಥಲೀಕರಣ ಘಟಕ ದಿಢೀರ್ ಬಂದ್ ಆಗಿದೆ. ಏಕಾಏಕಿ ಈ ಘಟಕ ಮುಚ್ಚಿದ ಕಾರಣ ಘಟಕದಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಬೀದಿ ಪಾಲಾಗುವಂತಹ ಪರಿಸ್ಥಿತಿ ಎದುರಾಗಿದೆ. ಈ ಘಟಕವನ್ನೇ ನಂಬಿಕೊಂಡು 10ಕ್ಕೂ ಮಿಕ್ಕಿದ ಹಾಲು ಸಾಗಾಟದ ವಾಹನಗಳ ಚಾಲಕರಿಗೂ ಘಟಕ ಮುಚ್ಚಿರುವುದರಿಂದ ತೊಂದರೆಯಾಗಿದೆ. ಪರ್ಯಾಯ ವ್ಯವಸ್ಥೆಯಿಲ್ಲದೆ ಚಿಂತೆಗೀಡಾಗಿದ್ದಾರೆ.
ಒಕ್ಕೂಟದ ಮೇಲೆ ಹಣಕಾಸಿನ ಹೊರೆ ಬಿದ್ದ ಹಿನ್ನೆಲೆಯಲ್ಲಿ ಈ ಘಟಕ ಮುಚ್ಚಲು ಒಕ್ಕೂಟ ತೀರ್ಮಾನಿಸಿದ ಕಾರಣ ಮೇ 31ಕ್ಕೆ ಶೀಥಲೀಕರಣ ಕೆಲಸ ನಿಲ್ಲಿಸಿದೆ. ಇದರಿಂದಾಗಿ ಈ ಘಟಕದಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಘಟಕದಲ್ಲಿ ದುಡಿಯುತ್ತಿದ್ದ ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಈ ನಾಲ್ಕು ತಾಲೂಕುಗಳಲ್ಲಿ ಇದೀಗ ಬಲ್ಕ್ ಕೂಲರ್ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಈ ಘಟಕಕ್ಕೆ ಇತ್ತೀಚೆಗೆ ಬರುವ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಈ ಘಟಕ ಆರಂಭಗೊಂಡ ಸಮಯದಲ್ಲಿ ದಿನಕ್ಕೆ 60 ಸಾವಿರ ಲೀಟರ್ ಹಾಲನ್ನು ಶೀಥಲೀಕರಣಗೊಳಿಸಿ ಮಂಗಳೂರಿನ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕ ಸಂಘಗಳು ಸಂಗ್ರಹಿಸಿದ ಹಾಲನ್ನು ಪುತ್ತೂರಿನ ಈ ಘಟಕದಲ್ಲಿ ಶೀಥಲೀಕರಿಸಿ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಆ ಸಮಯದಲ್ಲಿ 30ಕ್ಕೂ ಮಿಕ್ಕಿದ ಕಾರ್ಮಿಕರು ಈ ಘಟಕದಲ್ಲಿ ದುಡಿಯುತ್ತಿದ್ದು, ಇದೀಗ ಈ ಸಂಖ್ಯೆ 17 ಕ್ಕೆ ಇಳಿದಿದೆ. ಇದರಲ್ಲಿ ಕೇವಲ 4 ಮಂದಿ ಮಾತ್ರ ಖಾಯಂ ಕಾರ್ಮಿಕರಾಗಿದ್ದು, ಇವರನ್ನು ಮಂಗಳೂರಿನ ಘಟಕದಲ್ಲಿ ನಿಯೋಜಿಸಲಾಗಿದೆ.