ನ್ಯೂಸ್ ನಾಟೌಟ್ :ಕುಂಪಲದಲ್ಲಿ ಅಶ್ವಿನಿ ಎಂಬ ಯುವತಿಯ ಆತ್ಮಹತ್ಯೆ ಕೇಸ್ ಇಡೀ ಕರಾವಳಿಗರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು.25ರ ಹರೆಯದ ಯುವತಿ ನೋಡಲು ಸುಂದರವಾಗಿದ್ದು, ವಿದೇಶದಲ್ಲಿ ಕೆಲಸದಲ್ಲಿದ್ದ ಈಕೆ ಒಳ್ಳೆ ಸಂಪಾದನೆ ಮಾಡುತ್ತಿದ್ದ ಯುವತಿ.ಕನಸಿನ ಮನೆ ಕಟ್ಟಿ ಗೃಹಪ್ರವೇಶವಾಗಿ ಐದೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿರುದೇನಕ್ಕೆ ಎಂಬ ಹಲವು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡಿತ್ತು.ಇದೀಗ ಈ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.
ಮನೆಗೆ ಆಧಾರ ಸ್ಥಂಭದಂತಿದ್ದ ಅಶ್ವಿನಿ ಆಕೆ ತಾಯಿ ಜೊತೆ ವಾಸ ಮಾಡುತ್ತಿದ್ದಳು.ಮಾತ್ರವಲ್ಲ ಕುಟುಂಬಕ್ಕೂ ಆಧಾರವಾಗಿದ್ದಳು.ಅಶ್ವಿನಿ ಬಂಗೇರ ಮೂಲತ: ಬಂಟ್ವಾಳ ತಾಲೂಕಿನ ಫರಂಗಿಪೇಟೆಯವರು. ಇವರದು ಮಧ್ಯಮವರ್ಗದ ಕುಟುಂಬ.ಅಶ್ವಿನಿ ಎರಡು ವರ್ಷದ ಮಗುವಾಗಿದ್ದಾಗ ತಂದೆ ತೀರಿಕೊಂಡಿದ್ದರು. ಅದಾದ ಬಳಿಕ ತಾಯಿ ದೇವಕಿ ಆಕೆಯನ್ನು ಕಷ್ಟಪಟ್ಟು ಬೆಳೆಸಿ ಓದಿಸಿದ್ದರು. ಶಿಕ್ಷಣದ ಬಳಿಕ ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದ ಅಶ್ವಿನಿ ಒಂದೂವರೆ ತಿಂಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು. ವಾಸಕ್ಕೆ ಸ್ವಂತದೊಂದು ಮನೆ ಬೇಕೆಂಬುದು ಅಶ್ವಿನಿಯರ ಬಹುಕಾಲದ ಕನಸು . ದುಬೈಯಲ್ಲಿ ಉದ್ಯೋಗದಲ್ಲಿದ್ದಾಗ ಅಲ್ಲಿ ಸಂಗೀತ ಎನ್ನುವ ಮಹಿಳೆಯ ಪರಿಚಯ ಇವರಿಗಾಗಿದೆ. ಸಂಗೀತ ಅವರಿಗೆ ಕುಂಪಲದ ಚಿತ್ರಾಂಜಲಿಯಲ್ಲಿ ಮನೆಯಿದ್ದು ಅದಕ್ಕೆ ಬ್ಯಾಂಕ್ ಸಾಲವಿತ್ತು. ಹೀಗಾಗಿ ಆ ಮನೆಯನ್ನು ಮಾರಾಟ ಮಾಡುವ ಉದ್ದೇಶ ಸಂಗೀತ ಹೊಂದಿದ್ದು, ಅಶ್ವಿನಿ ಖರೀದಿಸುವ ಇರಾದೆ ವ್ಯಕ್ತಪಡಿಸಿದರು.ಅದರಂತೆ ಬ್ಯಾಂಕ್ ಸಾಲ ಮರುಪಾವತಿಯಾದ ತಕ್ಷಣ ಅಶ್ವಿನಿ ಹೆಸರಿಗೆ ಹೊಸ ಮನೆಯನ್ನು ನೋಂದಾವಣಿ ಮಾಡುವ ಬಗ್ಗೆ ಒಪ್ಪಂದ ನಡೆದಿತ್ತು.
ಸಂಗೀತಾ ಮನೆಗೆಂದು ಬ್ಯಾಂಕಿನಿಂದ ತೆಗೆದ ರೂ.18 ಲಕ್ಷ ಮರುಪಾವತಿ ಬಾಕಿಯಿತ್ತು.ಅದಕ್ಕಾಗಿ ಅಶ್ವಿನಿಗೆ ಮನೆ ನೀಡುವುದಕ್ಕೆ ಮುಂಚಿತವಾಗಿ ರೂ.7 ಲಕ್ಷ ನಗದು ಪಡೆದು, ನಂತರ 8 ತಿಂಗಳ ಕಾಲ ರೂ.17,000 ಇಎಂಐ ಆಕೆಯ ಬಳಿ ಪಾವತಿಸಿದ್ದಳು. ಜೂ. 5 ರಂದು ಚಿತ್ರಾಂಜಲಿನಗರದಲ್ಲಿ ಸಂಬಂಧಿಕರ, ಗೆಳೆಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಗೃಹಪ್ರವೇಶ ನಡೆದಿತ್ತು.ಆದರೆ ಹೊಸ ಮನೆಯ ಗೃಹ ಪ್ರವೇಶದ ದಿನ ಲೋನ್ ಪಡೆದಿದ್ದ ಬ್ಯಾಂಕ್ ಸಿಬ್ಬಂದಿ ಸೀಝರ್ ಗಳು ಮನೆಗೆ ಆಗಮಿಸಿದ್ದು, ಮನೆಮಂದಿ ಲೋನ್ ಪಾವತಿಸದೆ ಇದ್ದಲ್ಲಿ ಮನೆಯನ್ನು ಹರಾಜು ನಡೆಸುವುದಾಗಿ ಬೆದರಿಸಿದ್ದಾರೆ.ಅಲ್ಲದೆ ಕಳೆದ 1 ವರ್ಷದಿಂದ ಇಎಂಐ ಪಾವತಿಸದೆ ಇರುವುದನ್ನು ತಿಳಿಸಿ ತೆರಳಿದ್ದರು. ನೆಂಟರ ಮುಂದೆ ನನ್ನ ಮರ್ಯಾದೆ ಹೋಯಿತೆಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು ಯುವತಿ.
ಜೂ.8 ರಂದು ಬ್ಯಾಂಕ್ ಗೆ ಬರುವಂತೆ ಅಶ್ವಿನಿಗೆ ಸಿಬ್ಬಂದಿ ತಿಳಿಸಿ ತೆರಳಿದ್ದರು. ಕೈಯಲ್ಲಿದ್ದ ಹಣವನ್ನು ಕಳಕೊಂಡಿದ್ದ ಆಕೆ, ಈಗ ಮನೆಯನ್ನು ಕಳೆದುಕೊಳ್ಳಬೇಕಾದ ನೋವನ್ನು ಗೆಳತಿಯ ಜತೆ ಹಂಚಿಕೊಂಡಿದ್ದಾಳೆ ಎನ್ನಲಾಗಿದೆ. ಕೊನೆಗೆ ಹಣದ ವ್ಯವಸ್ಥೆ ಆಗಿಲ್ಲವೆಂದು, ಗುರುವಾರದಂದು ಬ್ಯಾಂಕ್ ಕಚೇರಿಗೆ ತೆರಳಬೇಕು ಅನ್ನುವ ಚಿಂತೆಯಿಂದ ರಾತ್ರಿಯಿಡೀ ಮನೆಯ ಕೋಣೆಯೊಳಗೆ ಕುಳಿತು ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಎನ್ನಲಾಗಿದೆ.ಡೆತ್ ನೋಟಲ್ಲಿ ಅಶ್ವಿನಿ ಯಾರ ವಿರುದ್ಧವು ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾಳೆ ಎನ್ನಲಾಗಿದೆ. ಇದರಂತೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
ಮಗಳ ಸಾವಿನಿಂದ ನೊಂದಿರುವ ತಾಯಿ ದೇವಕಿ, ಮಗಳ ಸಾವಿಗೆ ಆಕೆಯ ಸ್ನೇಹಿತರೇ ಕಾರಣ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೋಮೇಶ್ವರದ ನಿಖಿಲ್ ಹಾಗೂ ಇನ್ನಿಬ್ಬರು ಯುವತಿಯರು ಅಶ್ವಿನಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಗೃಹಪ್ರವೇಶ ನಡೆದ ಬಳಿಕ ಮನೆಯ ತಾರಸಿನಲ್ಲಿ ಕುಳಿತು ಸಿಗರೇಟು ಪಾರ್ಟಿ ಮಾಡಿ, ಮಗಳನ್ನೂ ಹಾಳು ಮಾಡುತ್ತಿದ್ದರು. ಸ್ನೇಹಿತರೇ ಆಕೆಗೆ ಮುಖ್ಯವಾಗಿತ್ತು, ತಾಯಿಯ ನೆನಪೇ ಇರಲಿಲ್ಲ. ದುಬೈಯಿಂದ ಬರುವ ವಿಚಾರವೂ ತನಗೆ ಗೊತ್ತಿರಲಿಲ್ಲ. ಸ್ನೇಹಿತರಿಗೆ ತಿಳಿದಿತ್ತು. ಮನೆ ಖರೀದಿಸಿರುವ ವಿಚಾರವೂ ಗಮನಕ್ಕೆ ಬಂದಿರಲಿಲ್ಲ. ಇದೀಗ ಮನೆಯ ಸಾಲವೇ ಆಕೆಯನ್ನು ಮುಗಿಸಿದ್ದು, ತನ್ನನ್ನು ಅನಾಥಳನ್ನಾಗಿ ಮಾಡಿ ಹೋಗಿದ್ದಾಳೆ ಎಂದಿದ್ದಾರೆ.