ನ್ಯೂಸ್ ನಾಟೌಟ್ : ಮುಸ್ಲಿಂ ಸಹೋದರರನ್ನು ಮದುವೆ ಮಾಡಿಕೊಡಲು ಮನೆಯವರು ಒಪ್ಪಿಗೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಹಿಂದೂ ಸಹೋದರಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮೃತ ಸಹೋದರಿಯರನ್ನು ತಮಿಳುನಾಡಿನ ತಿರುಚಿ ಜಿಲ್ಲೆಯ ವೇಲನಾಡುವಿನ ಗಾಯತ್ರಿ (23) ಮತ್ತು ವಿದ್ಯಾ (21) ಎಂದು ಗುರುತಿಸಲಾಗಿದೆ.
ಯುವತಿಯರು ತಿರುಪ್ಪೂರ್ನ ಜವಳಿ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಮಿಲ್ನಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಹೋದರರನ್ನು ಇಬ್ಬರೂ ಪ್ರೀತಿಸುತ್ತಿದ್ದರು. ಹಬ್ಬದ ಹಿನ್ನೆಲೆಯಲ್ಲಿ ರಜೆ ಪಡೆದು ಸಹೋದರಿಯರಿಬ್ಬರು ತವರಿಗೆ ಆಗಮಿಸಿದ್ದರು. ಈ ವೇಳೆ ಇಬ್ಬರು ಗಂಟೆಗಟ್ಟಲೇ ಫೋನ್ನಲ್ಲಿ ಮಾತನಾಡುವುದನ್ನು ಕಂಡು ತಂದೆ ಪಿಚೈ ಮತ್ತು ತಾಯಿ ಅಖಿಲಾಂಡೇಶ್ವರಿಗೆ ಅನುಮಾನ ಬಂದಿದೆ. ಈ ಬಗ್ಗೆ ಇಬ್ಬರನ್ನು ವಿಚಾರಿಸಿದಾಗ ಮುಸ್ಲಿಂ ಯುವಕರನ್ನು ಪ್ರೀತಿಸುತ್ತಿರುವುದಾಗಿ ಗಾಯತ್ರಿ ಮತ್ತು ವಿದ್ಯಾ ಹೇಳಿದ್ದಾರೆ. ಅನ್ಯಧರ್ಮದ ಸಂಬಂಧವಾದ್ದರಿಂದ ಪ್ರೀತಿಯನ್ನು ತಿರಸ್ಕರಿಸುತ್ತಾರೆ. ಇದರಿಂದ ಮನನೊಂದ ಸಹೋದರಿಯರು ಮಂಗಳವಾರ ಮನೆ ಬಿಟ್ಟು ಹೋದವರು ಮರಳುವುದೇ ಇಲ್ಲ. ಗ್ರಾಮಸ್ಥರಿಗೆ ಈ ವಿಚಾರ ತಿಳಿದು ಹುಡುಕಾಡಿದಾಗ ಗ್ರಾಮದಲ್ಲಿರುವ ಬಾವಿಯ ಬಳಿ ಚಪ್ಪಲಿಗಳು ಮತ್ತು ಮೊಬೈಲ್ ಫೋನ್ಗಳನ್ನು ಪತ್ತೆಯಾಗುತ್ತವೆ. ಅನುಮಾನಗೊಂಡು ಬಾವಿಯನ್ನು ನೋಡಿದಾಗ ಸಹೋದರಿಯರಿಬ್ಬರ ಹೆಣ ತೇಲಾಡುತ್ತಿರುವುದು ಕಂಡು ಬರುತ್ತದೆ. ಬಳಿಕ ಗ್ರಾಮಸ್ಥರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಶವಗಳನ್ನು ಮೇಲಕ್ಕಿತ್ತಿದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.