ನ್ಯೂಸ್ ನಾಟೌಟ್: ಕರಾವಳಿಯು ಭಾರಿ ಜಲಕ್ಷಾಮದ ಭೀತಿ ಎದುರಿಸಿದೆ. ಮಂಗಳೂರಿನ ಹಲವು ಭಾಗದಲ್ಲಿ ನೀರಿಲ್ಲ ಅನ್ನುವ ವರದಿಗಳು ಹೊರ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ನೀರಿನ ಕೊರತೆಯ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಕೈಕಾಲು, ತಟ್ಟೆ ತೊಳೆಯಲೂ ನೀರಿಲ್ಲ ಎನ್ನಲಾಗಿದೆ.
ನೀರಿನ ಸಮಸ್ಯೆಯಿಂದಾಗಿ ಕಟೀಲು ದೇಗುಲದ ಅನ್ನ ಪ್ರಸಾದಕ್ಕಾಗಿ ಕೊಡುವ ತಟ್ಟೆಯ ಬದಲು ಬಳಸಿ ಎಸೆಯುವ ಬಾಳೆ ಎಲೆಯನ್ನು ಬಳಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಭಕ್ತರು ಕೈಕಾಲು ತೊಳೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ದೇಗುಲಕ್ಕೆ ದಿನವೊಂದಕ್ಕೆ ಸುಮಾರು 7 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಅಲ್ಲಿಗೆ ನೀರು ಪೂರೈಸುತ್ತಿದ್ದ ಬೋರ್ ವೆಲ್ ಗಳು ಕೂಡ ಬತ್ತಿದೆ. ಈಗ ಖಾಸಗಿ ಟ್ಯಾಂಕರ್ ಗಳ ಮೂಲಕ ದೇಗುಲಕ್ಕೆ ನೀರು ಪೂರೈಕೆಯಾಗುತ್ತಿದೆ.
ಆದರೆ ಶೌಚಾಲಯ, ಅಥಿತಿ ಗೃಹಗಳಿಗೆ ಸರಿಯಾದ ನೀರು ಪೂರೈಕೆಯಿಲ್ಲದೆ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಕಟೀಲು ಕ್ಷೇತ್ರದ ಶಾಲೆಗಳಿಗೆ ನೀರಿನ ಸರಬರಾಜು ಮಾಡಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಅರ್ಧ ದಿನವಷ್ಟೇ ತರಗತಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ನಗರ ಭಾಗಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಮಂಗಳೂರು ಉತ್ತರ, ದಕ್ಷಿಣದಲ್ಲೂ ನೀರಿನ ಅಭಾವ ಉಂಟಾಗಿದೆ. ನೀರಿನ ಸಮಸ್ಯೆಯಿಂದ ಕೆಲವು ಶಾಲೆಗಳಲ್ಲಿ ಅರ್ಧ ದಿನ ಮಾತ್ರ ತರಗತಿ ಮಾಡಲಾಗುತ್ತಿದೆ. ಹಲವು ಕಡೆ ಆನ್ಲೈನ್ ಮೂಲಕ ಕ್ಲಾಸ್ ನಡೆಸಲಾಗುತ್ತಿದೆ.