ನ್ಯೂಸ್ ನಾಟೌಟ್: ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಹಾವೇರಿಯಲ್ಲಿ ನಡೆದಿದೆ.
ಬಾಗಲಕೋಟೆ ಮೂಲದ ಅಖಿಲ್ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಬಾಳುವುದಾದರೆ ಇಬ್ಬರೂ ಜೊತೆಗೆ ಬಾಳುವ ನಿರ್ಣಯ ಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿ.
ಕೂಡಲೇ ಎಚ್ಚೆತ್ತ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಹೇಮಾ ಕೊನೆಯುಸಿರೆಳೆದಿದ್ದಾಳೆ. ಪ್ರಜ್ಞೆ ಕಳೆದುಕೊಂಡಿದ್ದ ಅಖಿಲ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಚಳಗೇರಿ ಟೋಲ್ 5 ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.