ನ್ಯೂಸ್ ನಾಟೌಟ್ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಸುಳ್ಯ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಸುಳ್ಯದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಬಿ. ಮೋಹನ್ ಮತ್ತು ಸಿವಿಲ್ ನ್ಯಾಯಾಧೀಶರು ಹಾಗೂ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಕು.ಅರ್ಪಿತಾ ಉದ್ಘಾಟಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಮೋಹನ್ ಮಾತನಾಡಿ, ನೆಟ್ಟ ಗಿಡಗಳು ಮರವಾದ ಬಳಿಕ ಕಡಿದು ನಾಶ ಮಾಡಿ ಮನೆಗಳನ್ನು ಕಟ್ಟುತ್ತಿದ್ದಾರೆ. ಜನರಿಗೆ ಉಸಿರಾಡಲು ಬೇಕಾದ ಶುದ್ಧ ಗಾಳಿಗಾಗಿ ಎಲ್ಲರೂ ಗಿಡ ನೆಟ್ಟು ಬೆಳೆಸಿ ಪರಿಸರವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಾಲಯದ ಪರಿಸರದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಆರೋನ್ ಡಿ’ಸೋಜ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್. , ಪ್ಯಾನಲ್ ವಕೀಲ ಕು. ಲೋಲಾಕ್ಷಿ ಹಾಗೂ ನ್ಯಾಯಾಲಯದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.