ನ್ಯೂಸ್ ನಾಟೌಟ್ : ಚುನಾವಣಾ ಸಮಯದಲ್ಲಿ ಸೌಲಭ್ಯ ಕೊಟ್ಟು ಬಳಿಕ ನಿಲ್ಲಿಸಿದ ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ಕೂಡಿಹಾಕಿ ಬೀಗ ಜಡಿದಿರುವ ಘಟನೆ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಗದೀಶ್ವರ ನಗರದಲ್ಲಿ ಕಳೆದ 6 ವರ್ಷಗಳಿಂದ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಇರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ನಿವಾಸಿಗಳು ಮನವಿ ಮಾಡಿದ್ದರು. ಅಧಿಕಾರಿಗಳು ಚುನಾವಣಾ ಸಮಯದಲ್ಲಿ ತಾತ್ಕಾಲಿಕವಾಗಿ ನೀರು ಮತ್ತು ವಿದ್ಯುತ್ ಪೂರೈಕೆ ಮಾಡಿ, ಚುನಾವಣೆ ಬಳಿಕ ಮತ್ತೆ ಎಲ್ಲಾ ಸೌಲಭ್ಯವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ಕೂಡಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿ ತಿಳಿಸಿದೆ.