ನ್ಯೂಸ್ ನಾಟೌಟ್ : ‘ಶಕ್ತಿ’ ಯೋಜನೆಯಡಿ ಸರ್ಕಾರಿ ಬಸ್ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪುರುಷರಿಗೂ ಏನಾದರೂ ರಿಯಾಯಿತಿ ಕೊಡಿ ಎಂದು ಚರ್ಚೆಗಳು ಆರಂಭವಾಗಿವೆ. ಈ ನಡುವೆ ಕೆಕೆಆರ್ಟಿಸಿ ಬಸ್ಸನ್ನೇ ಪ್ರಯಾಣಿಕನೋರ್ವ ಚಲಾಯಿಸಿಕೊಂಡು ಊರಿಗೆ ಹೊರಟು ಇದೀಗ ಕಂಬಿ ಎಣಿಸುವಂತಾಗಿದೆ.
ಸೋಮವಾರ ಬೀದರ್ನ ಔರಾದ್ನಲ್ಲಿ ಯಶಪ್ಪ ಸೂರ್ಯವಂಶಿ ಎಂಬಾತ ಊರಿಗೆ ತೆರಳಲು ಔರಾದ್ ನಿಲ್ದಾಣದಲ್ಲಿ ಬಸ್ಗಾಗಿ ಸುಮಾರು ಹೊತ್ತು ಕಾದು ಕುಳಿತಿದ್ದ. ಬಸ್, ಬಾರದೇ ಇದ್ದಾಗ ನಿಂತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ (ಕೆಕೆಆರ್ಟಿಸಿ) ಬಸ್ಸನ್ನೇ ಚಲಾಯಿಸಿಕೊಂಡು ಊರಿಗೆ ಹೊರಟೇ ಬಿಟ್ಟ! ಹೋಗಿ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ರಸ್ತೆಯ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಈ ಘಟನೆಯಿಂದ ಯಾರಿಗೂ ಗಾಯ ಅಥವಾ ಪ್ರಾಣಪಾಯಗಳು ಸಂಭವಿಸಿಲ್ಲ. ಬಸ್ ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಯಶಪ್ಪ ಸೂರ್ಯವಂಶಿಯನ್ನು ಪೊಲೀಸರು ಹಿಡಿದು ಬಂಧಿಸಿದ್ದಾರೆ.
ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯಶಪ್ಪ ಸೂರ್ಯವಂಶಿ ಸೋಮವಾರ ಊರಿಗೆ ತೆರಳಲು ಔರಾದ್ ನಿಲ್ದಾಣಕ್ಕೆ ಬಂದಿದ್ದ. ಸಾಕಷ್ಟು ಹೊತ್ತು ಕಳೆದರೂ ಬಸ್ ಬಾರದೇ ಇದ್ದ ಕಾರಣ ಮದ್ಯಪಾನ ಮಾಡಿದ್ದ ಆತ ಊರಿಗೆ ಬಸ್ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದ. ಆದರೆ ಪ್ರಯಾಣಿಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆತ ಅದನ್ನು ನಿಜ ಮಾಡಿಯೇ ಬಿಟ್ಟಿದ್ದ. ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಬಿಟ್ಟು ಎಂಟ್ರಿ ಮಾಡಿಸಲು ನಿಲ್ದಾಣದ ಒಳ ಹೋದಾಗ ಓಡಿ ಹೋಗಿ ಬಸ್ ಹತ್ತಿ ಅದನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಆಗ ಬಸ್ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿದ್ದು, ಕುಡಿದ ಮತ್ತಿನಲ್ಲಿದ್ದ ಯಶಪ್ಪ ಸೂರ್ಯವಂಶಿ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ರಸ್ತೆಯ ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದಿದೆ. ಆಗ ಓಡಲು ಪ್ರಯತ್ನ ನಡೆಸಿದ ಆತನನ್ನು ಪೊಲೀಸರು ಜನರ ಸಹಾಯದಿಂದ ಹಿಡಿದು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.