ನ್ಯೂಸ್ ನಾಟೌಟ್: ಜ್ಞಾನವಾಪಿ ಪ್ರಕರಣಕ್ಕೆ ರೋಚಕ ತಿರುವು ದೊರೆತಿದ್ದು, ವಾರಣಾಸಿಯ “ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಿಂದ ನಾನು ಹಾಗೂ ನಮ್ಮ ಕುಟುಂಬ ಹಿಂದೆ ಸರಿಯುತ್ತಿದ್ದೇವೆ” ಎಂದು ವಿಶ್ವವೇದಿಕ್ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ವೈಸೆನ್ ಪ್ರಕಟಿಸಿದ್ದಾರೆ.
ಸಂಪನ್ಮೂಲ ಕೊರತೆ ಕಾರಣ, ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ಗುಡಿಯಲ್ಲಿ ನಿತ್ಯ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಪ್ರಮುಖ ದಾವೆ (ಉತ್ತರ ಪ್ರದೇಶ ಸರ್ಕಾರದ ವಿರುದ್ಧ ರಾಖಿ ಸಿಂಗ್ ಮತ್ತು ಇತರರು ಸಲ್ಲಿಸಿದ ದಾವೆ) ಸೇರಿದಂತೆ ಎಲ್ಲ ಪ್ರಕರಣಗಳಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ವೈಸೆನ್ ಅವರ ಸೊಸೆ ರಾಖಿ ಸಿಂಗ್ ಸೇರಿದಂತೆ ಐದು ಮಂದಿ ಮಹಿಳಾ ಅರ್ಜಿದಾರರು, 2021ರ ಆಗಸ್ಟ್ನಲ್ಲಿ ಮೂಲ ಶೃಂಗಾರಗೌರಿ ದಾವೆ ಹೂಡಿದ್ದರು. ಆದರೆ ರಾಖಿ ಹಾಗೂ ಇತರ ಮಹಿಳೆಯರು 2022ರ ಮೇ ತಿಂಗಳಲ್ಲಿ ಬೇರ್ಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಕಕ್ಷಿದಾರರ ಜತೆ ಸಂವಹನದ ಕೊರತೆ ಮತ್ತು ವಕೀಲರ ಶುಲ್ಕವನ್ನು ನೀಡಲು ಸಾಧ್ಯವಾಗದ ಕಾರಣದಿಂದಾಗಿ ಎಲ್ಲ ವಿವಿಎಸ್ಎಸ್ ಪ್ರಕರಣಗಳನ್ನು ಮುಂದುವರಿಸದಿರಲು ನಿರ್ಧರಿಸಿದ್ದಾಗಿ ಅವರ ವಕೀಲ ಶಿವಂ ಗೌರ್ ಪ್ರಕಟಿಸಿದ ಬೆನ್ನಲ್ಲೇ ವೈಸೆನ್ ಈ ನಿರ್ಧಾರ ಪ್ರಕಟಿಸಿದ್ದಾರೆ.