ನ್ಯೂಸ್ ನಾಟೌಟ್: ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಸಂಘಟನೆಯ ಐದು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ತಲಪಾಡಿ ನಿವಾಸಿ ಅಖಿಲ್ ಎಂಬಾತನನ್ನು ಬಂಧಿಸಲಾಯಿತು. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿದಂತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲ ನಿವಾಸಿ ಸಚಿನ್ , ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್ ವಶಕ್ಕೆ ಪಡೆಯಲಾಗಿದೆ. ಬಂಧಿತರು ಹಿಂದೂ ಸಂಘಟನೆಗೆ ಸೇರಿದವರಂದು ತಿಳಿದುಬಂದಿದೆ. ಬಂಧಿತರಲ್ಲಿ ಓರ್ವ ಅಪ್ರಾಪ್ತನಾಗಿದ್ದಾನೆ. ಐಪಿಸಿ 307 ಹಾಗೂ ಗಲಭೆ ಸೃಷ್ಟಿ ಆರೋಪದಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಸಾಯಂಕಾಲ ಸೋಮೇಶ್ವರ ಬೀಚ್ನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಮೂವರು ಹಿಂದು ವಿದ್ಯಾರ್ಥಿನಿಯರು ಬೀಚ್ನಲ್ಲಿ ಸುತ್ತಾಡುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಯುವಕರ ತಂಡ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ದೂರಿನಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಭೇಟಿ ನೀಡಿ ಘಟನೆ ಬಗ್ಗೆ ಸಿಸಿಬಿ ಎಸಿಪಿ ಪಿ.ಎ ಹೆಗ್ಡೆ ಹಾಗೂ ಉಳ್ಳಾಲ ಇನ್ಸ್ಪೆಕ್ಟರ್ ಅವರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಠಾಣೆಯಲ್ಲೇ ಕಮಿಷನರ್ ಮೊಕ್ಕಾಂ ಹೂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉಳಿದ ಆರೋಪಿಗಳ ಶೀಘ್ರ ಪತ್ತೆಗೆ ಕಮಿಷನರ್ ಕುಲದೀಪ್ ಮೂರು ಪೊಲೀಸ್ ತಂಡಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಪ್ರಮುಖರು ಠಾಣೆಗೆ ಭೇಟಿ ನೀಡಿದ್ದಾರೆ. ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಬಜರಂಗದಳ ಪ್ರಮುಖರು ಠಾಣೆಗೆ ಭೇಟಿ ನೀಡಿ ಕಮಿಷನರ್ ಕುಲದೀಪ್ ಜೈನ್ ಅವರನ್ನು ಭೇಟಿಯಾಗಿ ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸಲಾಗುವುದು. ವಶಕ್ಕೆ ಪಡೆದವರು ಕೇಸ್ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ ಎಂದು ಕಮಿಷನರ್ ಭೇಟಿ ಬಳಿಕ ಬಿಜೆಪಿ ಮುಖಂಡ ಸತೀಶ್ ಕುಂಪಲ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ. ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ಗೆ ಬಂದಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ.
ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಸಹಜವಾಗಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಇಂಥ ಘಟನೆಗಳಿಗೆ ಯಾರೂ ಆಸ್ಪದ ನೀಡಬಾರದು. ಅಮಾಯಕರ ಬಂಧನ ಸರಿಯಲ್ಲ. ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ ಅವರ ಕುಟುಂಬದವರು ಬಂದು ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.