ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿ ಸೋಲಿನ ಅವಲೋಕನದಲ್ಲಿ ತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಮಂದಿ ಹಾಲಿ ಸಂಸದರನ್ನು ಮನೆಯಲ್ಲಿ ಕೂರಿಸಲು ನಿರ್ಧರಿಸಿದೆ. ಇವರಲ್ಲಿ ಇಬ್ಬರು ಕರಾವಳಿಯ ಹಾಲಿ ಸಂಸದರು ಅನ್ನುವುದು ವಿಶೇಷ.
ನಿರೀಕ್ಷೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಲಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ಗೆ ಈ ಸಲ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಮಾಜಿ ಮುಖ್ಯಮಂತ್ರಿ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡರಿಗೂ ಈ ಸಲ ಟಿಕೆಟ್ ಸಿಗುವ ನಿರೀಕ್ಷೆಗಳಿಲ್ಲ. ಇವರಿಗೆ ಟಿಕೆಟ್ ನೀಡುವುದು ಬೇಡ ಅನ್ನುವ ನಿಲುವನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ತುಮಕೂರು ಸಂಸದ ಜಿ.ಎಸ್.ಬಸವರಾಜು, ಚಾಮರಾಜನಗರದ ಸಂಸದ ಶ್ರೀನಿವಾಸ್ ಪ್ರಸಾದ್, ಚಿಕ್ಕಬಳ್ಳಾರದ ಸಂಸದ ಬಿ.ಎನ್.ಬಚ್ಚೇಗೌಡ, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ, ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಹಾವೇರಿ ಸಂಸದ ಶಿವವಕುಮಾರ್ ಉದಾಸಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರಗೆ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಹಾಲಿ ಸಂಸದರಿಗೆ ಟಿಕೆಟ್ ನೀಡದಿರಿರುವುದಕ್ಕೆ ಬಿಜೆಪಿ ಹೈಕಮಾಂಡ್ ಬಲವಾದ ಕಾರಣವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಕೆಲವರು ನಾಯಕರಿಗೆ ವಯಸ್ಸಿನ ಸಮಸ್ಯೆ, ಇನ್ನೂ ಕೆಲವರಿಗೆ ನಿರಾಸಕ್ತಿ, ಮತ್ತೆ ಕೆಲವರು ವಿಪರೀತ ಟ್ರೋಲ್ಗೆ ಒಳಗಾಗಿರುವುದರಿಂದ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.