ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ಅನ್ನದಾನ, ವಿದ್ಯಾದಾನ ಶ್ರೇಷ್ಠ ಎಂಬ ಮಾತಿದೆ. ಇದೀಗ ಕ್ಯಾನ್ಸರ್ ಪೀಡಿತರಿಗಾಗಿ ಕೊಡುವ ಕೂದಲು ದಾನ ಕೂಡ ಅಷ್ಟೇ ಶ್ರೇಷ್ಠವಾಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.
ಇಲ್ಲೊಬ್ಬ 5ನೇ ತರಗತಿಯ ಬಾಲಕ ಕ್ಯಾನ್ಸರ್ ಪೀಡಿತರಿಗಾಗಿ ತನ್ನ ತಲೆಯ ಕೂದಲನ್ನೇ ಕಟ್ ಮಾಡಿ ಕೊಟ್ಟಿದ್ದು ಸಣ್ಣ ವಯಸ್ಸಿನಲ್ಲಿಯೇ ದೊಡ್ಡತನ ಮೆರೆದಿದ್ದಾನೆ. ಸಮಾಜ ಕಾರ್ಯದಲ್ಲಿ ತನ್ನದೊಂದು ಇರಲಿ ಅಳಿಲು ಸೇವೆ ಅನ್ನುವ ಮನೋಭಾವನೆ ಮೆರೆದಿರುವ ಬಾಲಕನ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.
ಮೂಲತಃ ಕಾಸರಗೋಡು ಮತ್ತು ಸುಳ್ಯ ತಾಲೂಕಿನ ಗಡಿಭಾಗ ಅಡೂರಿನ ನವೀನ್ ರಾವ್ ಸಿಂಧ್ಯಾ -ಭವಾನಿ ದಂಪತಿಯ ಪುತ್ರ ರತೀಶ್ ಸಿ. (11 ವ) ಇಂಥಹದ್ದೊಂದು ಒಳ್ಳೆಯ ಕೆಲಸವನ್ನು ಮಾಡಿದ್ದಾನೆ. ಈತ ಮೂರು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಉದಯಭಾಸ್ಕರ್ ಮೂಲಕ ಕ್ಯಾನ್ಸರ್ ಪೀಡಿತರಿಗೆ ಹಸ್ತಾಂತರಿಸಿದ್ದಾನೆ. ಪ್ರಸ್ತುತ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಗಜಾನನ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.