ನ್ಯೂಸ್ ನಾಟೌಟ್: ಚುನಾವಣೆಗೂ ಮುನ್ನ ಘೋಷಿಸಿದ ಉಚಿತ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಸಿದ್ದು ಚರ್ಚೆ ನಡೆಸಲು ಬುಧವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಈಗಾಗಲೇ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದುಕೊಳ್ಳದಿದ್ದರೆ ಪ್ರತಿಭಟನೆಯ ಬಿಸಿ ಮುಟ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಸರಕಾರ ಹಂತ-ಹಂತವಾಗಿ ಯೋಜನೆಯನ್ನು ಜಾರಿಗೆ ತರುವುದಕ್ಕೆ ಪ್ರಯತ್ನ ಪಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಯಾರಿಗೆ ಸಿಗುತ್ತೆ ಉಚಿತ ಬಸ್ ಪ್ರಯಾಣ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಲ್ ಅಥವಾ ಬಿಪಿಲ್ ನಡಿ ಇರುವವರು ಎಂಬುದಾಗಿ ಹೇಳಿಲ್ಲ. ಹಾಗಾಗಿ ಎಲ್ಲ ಮಹಿಳೆಯರು ಸರಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಇದನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ರು.2000 ಸಿಗುವುದು ಅತ್ತೆಗೋ ಸೊಸೆಗೋ..?
ಗೃಹ ಲಕ್ಷ್ಮೀ ಯೋಜನೆಯಡಿ ಮಾಸಿಕ ರು.2000 ಸಿಗುವುದು ಯಾರಿಗೆ ಅನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇಬ್ಬರು ಇದ್ದರೆ ಅವರಲ್ಲಿ ಯಾರಿಗೆ ಸಿಗುತ್ತದೆ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹ ಲಕ್ಷ್ಮೀ ಯೋಜನೆಯಡಿ ಮಾಸಿಕ ರು.2000 ನೀಡಲು ಮೊದಲು ಅತ್ತೆಗೆ ಮೊದಲ ಆದ್ಯತೆ ನೀಡಲಾಗುವುದು. ಇಲ್ಲದಿದ್ದರೆ ಅತ್ತೆ ಒಪ್ಪಿಗೆ ನೀಡಿದಲ್ಲಿ ಸೊಸೆಗೆ ಗೌರವಧನ ನೀಡಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.