ನವದೆಹಲಿ: ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಕುಸ್ತಿಪಟುಗಳ ಹೋರಾಟ ಇದೀಗ ಹೊಸ ಸಂಸತ್ ಭವನದ ತನಕ ತಲುಪಿದೆ. ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಖಂಡಿಸಿ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಆದರೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದ ಎದುರು ಪ್ರತಿಭಟನಾ ನಡೆಸಲು ಮುಂದಾಗಿದ್ದರು. ಅಲ್ಲದೆ ನೂತನ ಸಂಸತ್ ಭವನದ ಎದುರು ಮಹಾಪಂಚಾಯತ್ ನಡೆಸಿ ತಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಲು ಮುಂದಾಗಿದ್ದರು.
ಆದರೆ ಇದಕ್ಕೆ ಅವಕಾಶ ನೀಡದ ಪೊಲೀಸರು ಈಗಿರುವ ಸ್ಥಳದಲ್ಲೇ ಪ್ರತಿಭಟಿಸುವಂತೆ ಸೂಚಿಸಿದ್ದರು. ಇದಕ್ಕೊಪ್ಪದ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಅರಿತ ಪೊಲೀಸರು ತಕ್ಷಣ ಕುಸ್ತಿಪಟುಗಳನ್ನು ವಶಕ್ಕೆ ಪಡೆದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.