ನ್ಯೂಸ್ ನಾಟೌಟ್ :ಪುತ್ತೂರಿನಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಕಾರ್ಯಕರ್ತರನ್ನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿಯಾಗಿದ್ದಾರೆ.ಗಾಯಾಳುಗಳ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು “ವಿಷಯ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಗ್ರಾಮಾಂತರ ಪಿಎಸ್ಐ ಮತ್ತು ಗ್ರಾಮಾಂತರ ಠಾಣೆಯ ಪಿಸಿಯವರ ಮೇಲೆ ಎಫ್ಐಆರ್ ದಾಖಲಿಸಿ ಇಬ್ಬರನ್ನೂ ಅಮಾನತು ಮಾಡಿಸಿದ್ದೇನೆ. ಇನ್ನೊಬ್ಬರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಗಾಯಾಳುಗಳು ಶಾಸಕರೊಂದಿಗೆ ತಮಗಾದ ನೋವನ್ನು ತೆರೆದಿಟ್ಟರು.“ ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಿ ಬೇಕಾಬಿಟ್ಟಿ ಥಳಿಸಿ, ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದ್ದಾರೆ ಎಂದಿದ್ದು, ಡಿವೈಎಸ್ಪಿಯವರೇ ಹೆಚ್ಚು ಹೊಡೆದಿದ್ದಾರೆ.ಬೇಕಾಬಿಟ್ಟಿಯಾಗಿ ಮನಸೋ ಇಚ್ಛೆ ಮುಖಮೂತಿ ನೋಡದೆ ಹಲ್ಲೆ ಮಾಡಿದ್ದಲ್ಲದೇ ರಕ್ತ ಬರುವಲ್ಲಿಯವರೆಗೆ ಬಿಡದೆ ಹೊಡೆದಿದ್ದಾರೆ. ಪೊಲೀಸರ ಹಲ್ಲೆಯಿಂದ ನಮ್ಮಲ್ಲಿ ಒಬ್ಬರ ಕಿವಿಗೆ ಹಾನಿಯಾಗಿದ್ದು ಅವರು ಕಿವುಡಾಗಿದ್ದಾರೆ ಎಂದು ಎಂದು ಶಾಸಕರ ಬಳಿ ನೋವು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು “ ಎಡಿಜಿಪಿ ಅಲೋಕ್ ಕುಮಾರ್ ಜೊತೆ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದೇನೆ. ಒತ್ತಡ ಹಾಕುವ ಮೂಲಕ ನಿಮ್ಮ ಮೇಲೆ ದೌರ್ಜನ್ಯ ನಡೆದಿದೆ. ಯಾರು ಒತ್ತಡ ಹಾಕಿದವರೆಂದು ಪುತ್ತೂರಿನ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಂದೂ ಇಂಥಹ ಕೃತ್ಯವನ್ನು ಮಾಡಿಸಿಲ್ಲ, ಮಾಡಿಸುವುದೂ ಇಲ್ಲ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ” ಎಂದು ಹೇಳಿದರು.