ನ್ಯೂಸ್ನಾಟೌಟ್: ಗುಣಮಟ್ಟವಿಲ್ಲದ ಕಳಪೆ ರಸ್ತೆಯಿಂದಾಗಿ ಎಷ್ಟೋ ಸಾರ್ವಜನಿಕರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯ ಎಷ್ಟೇ ಎಚ್ಚರಿಕೆ ನೀಡಿದರೂ ಪಾಲಿಕೆಗಳು ಮಾತ್ರ ಈ ಬಗ್ಗೆ ಸರಿಯಾಗಿ ಗಮನಿಸುವುದೇ ಇಲ್ಲ. ಜತೆಗೆ ಗುತ್ತಿಗೆದಾರರು ಕ್ಯಾರೇ ಅನ್ನುತ್ತಿಲ್ಲ. ಆದರೆ ಈ ಸಮಸ್ಯೆಗೆ ಅಂತ್ಯ ಹಾಡಲು ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ಹೊಸ ನಿಯಮ ಜಾರಿಗೊಳಿಸಿದೆ.
ಇನ್ನು ಮುಂದೆ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಅದಕ್ಕೆ ಗುತ್ತಿಗೆದಾರರು ಹೊಣೆಯಾಗಲಿದ್ದು, ಒಂದು ಗುಂಡಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಥಾಣೆಯ ಮುನ್ಸಿಪಲ್ ಕಾರ್ಪೊರೇಷನ್ ಎಚ್ಚರಿಕೆ ಸಂದೇಶವನ್ನು ಗುತ್ತಿಗೆದಾರರಿಗೆ ರವಾನಿಸಿದೆ. ಈ ವಿಚಾರವನ್ನು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ 134 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಾವು ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಮಾತ್ರ ಖಚಿತಪಡಿಸಿಕೊಳ್ಳುವುದಿಲ್ಲ. ಜತೆಗೆ ರಸ್ತೆಗಳ ಗುಣಮಟ್ಟದ ಬಗ್ಗೆಯೂ ಗಮನಹರಿಸುತ್ತಿದ್ದೇವೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಒಪ್ಪಂದದಲ್ಲಿ ಒಂದು ಷರತ್ತು ಸೇರಿಸಿದೆ. ಇನ್ನು ಮುಂದೆ ಹೊಸದಾಗಿ ನಿರ್ಮಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ, ಪ್ರತಿ ಗುಂಡಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇಂತಹ ಕಳಪೆ ಕಾಮಗಾರಿಗಳನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಶಿಂಧೆ ಹೇಳಿದ್ದಾರೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಹೊಂಡ ಬಿದ್ದು ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಹಾಗೆಯೇ ಕಾಮಗಾರಿಗಳು ಸುಸೂತ್ರವಾಗಿ ನಡೆದರೆ ಸಂಬಂಧಪಟ್ಟ ಅಧಿಕಾರಿಯನ್ನು ಸನ್ಮಾನಿಸಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ.