ನ್ಯೂಸ್ ನಾಟೌಟ್: ಪ್ರವಾಹಕ್ಕೂ ಮೊದಲು ಅಧಿಕಾರಿಗಳು ನಿದ್ದೆಯಿಂದ ಎದ್ದು ಹೂಳೆತ್ತುವ ಕೆಲಸ ಮಾಡದಿದ್ದರೆ ಸುಳ್ಯ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಪಾಜೆ ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಸಂಪಾಜೆ ಗ್ರಾಮ ಪ್ರವಾಹಕ್ಕೆ ತುತ್ತಾಗಿ ಲಕ್ಷಾಂತರ ರೂ.ನಷ್ಟವನ್ನು ಅನುಭವಿಸಿತ್ತು. ಅನೇಕರು ಮನೆ, ಅಂಗಡಿಗಳನ್ನು ಕಳೆದುಕೊಂಡಿದ್ದಾರೆ. ಕಳೆದ ಬಾರಿಯ ಪ್ರವಾಹದಿಂದ ಪಯಸ್ವಿನಿ ಹೊಳೆಯಲ್ಲಿ ವಿಪರೀತ ಹೂಳು ತುಂಬಿಕೊಂಡಿದೆ. ಇದನ್ನು ಸರಿಪಡಿಸಿಕೊಡುವಂತೆ ಗಣಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಈಗ ಊರಿನ ಜನ ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗಡೆಯಾಗುವ ಆತಂಕದಲ್ಲಿದ್ದಾರೆ. ಇದನ್ನು ಮೇ೩೦ ರೊಳಗೆ ಸರಿಪಡಿಸಿಕೊಡದಿದ್ದರೆ ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.