ನ್ಯೂಸ್ ನಾಟೌಟ್ : ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಕಾಡೆಮಿ, ರಂಗಾಯಣ ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಮೊದಲ ಅಧಿವೇಶನದ ದಿನವೇ ಈ ಆದೇಶ ಹೊರಡಿಸಲಾಗಿದ್ದು, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ!…
ಅಕಾಡೆಮಿ ಅಧ್ಯಕ್ಷರ ಅವಧಿ 3 ವರ್ಷವಿದ್ದರೂ ಸರಕಾರ ಬದಲಾದ ಹಿನ್ನೆಲೆ ಇದೀಗ ಅಕಾಡೆಮಿ ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಾರ್ಕಳದಲ್ಲಿ 6ನೇ ಯಕ್ಷರಂಗಾಯಣ ಸ್ಥಾಪನೆಯಾಗಿತ್ತು.ಈ ವೇಳೆ ಹಿರಿಯ ರಂಗಕರ್ಮಿ ಜೀವನ್ರಾಂ ಸುಳ್ಯ ಅವರು 2022 ಎ. 8ರಂದು ಅಧಿಕಾರ ವಹಿಸಿದ್ದರು. ಯಕ್ಷರಂಗಾಯಣ ನಿರ್ದೇಶಕರಾಗಿ ಜೀವನ್ ರಾಂ ಸುಳ್ಯ ಅವರು ಯಕ್ಷರಂಗಾಯಣದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದರು. ಇವರ ಅವಧಿಯಲ್ಲಿ ಹಲವಾರು ಸೃಜನಾತ್ಮಕ ಯೋಜನೆಗಳಿಗೆ ಅಡಿಪಾಯ ಹಾಕಿದ್ದರು. ಕಾರ್ಕಳ ಹೆಬ್ರಿ ಭಾಗದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಿದ್ದರು.
ಚಿಣ್ಣರ ಮೇಳ ಆಯೋಜನೆ ಮೂಲಕ ಎಳವೆಯಿಂದಲೇ ಮಕ್ಕಳು ಪ್ರತಿಭಾವಂತರಾಗಿ ಬೆಳೆಯುವಂತೆ ಮಾಡಿದ್ದ ಜೀವನ್ ರಾಂ ಅವರು ಪರಶುರಾಮ, ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ – 1837 ನಾಟಕಗಳನ್ನು ನಿರ್ದೇಶಿಸಿದರು. ಅವರನ್ನು ಅವಧಿ ಪೂರ್ಣವೇ ಸರಕಾರ ನೇಮಕಾತಿ ರದ್ದುಪಡಿಸಿರುವುದರಿಂದ ಕಾರ್ಕಳದ ಸಾಂಸ್ಕೃತಿಕ ಲೋಕಕ್ಕೆ ಭಾರಿ ಹಿನ್ನಡೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.ಕಾರ್ಕಳದ ಹಲವು ಕಲಾವಿದರಿಗೂ ಇದೊಂದು ಶಾಕಿಂಗ್ ನ್ಯೂಸ್.. ಸದ್ಯ ಜನರಿಂದ ಕೇಳಿ ಬರುತ್ತಿರುವ ಅಭಿಪ್ರಾಯವೆಂದರೆ ಕಾರ್ಕಳದ ಸಾಂಸ್ಕೃತಿಕ ಚಟುವಟಿಕೆ ಮತ್ತು ಯಕ್ಷರಂಗಾಯಣದ ಹಿತದೃಷ್ಟಿಯಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಅರ್ಹ ವ್ಯಕ್ತಿಯಾಗಿರುವುದು ಜೀವನ್ ರಾಂ ಸುಳ್ಯ ಅವರು. ಅವರೇ ಮುಂದುವರಿಯಬೇಕೆಂದು ಒತ್ತಾಯಗಳು ಕೇಳಿ ಬಂದಿವೆ.