ನ್ಯೂಸ್ ನಾಟೌಟ್ : ಸುಳ್ಯ ಸಮೀಪದ ಪಾಲಡ್ಕ ಎಂಬಲ್ಲಿ ನಿನ್ನೆ ರಾತ್ರಿ ವೇಳೆ ಬೈಕ್ ಮತ್ತು ಕಾರು ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಬೈಕ್ ಸವಾರ ಸ್ವರೂಪ್ ಅವರ ಮೃತದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿತ್ತು.ಇದಾದ ಬಳಿಕ ಕುಟುಂಬದವರು ತಮ್ಮೂರಾದ ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.ಪ್ರೀತಿಯ ಮಗನನ್ನು ಕಳೆದು ಕೊಂಡ ಪೋಷಕರ ರೋಧನ ಮುಗಿಲು ಮುಟ್ಟಿದೆ.
ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಭ್ರಮ್ ಮತ್ತು ಸ್ವರೂಪ್ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಕಾರು ಬರುತ್ತಿತ್ತು. ಪಾಲಡ್ಕದಲ್ಲಿ ಪರಸ್ಪರ ಗುದ್ದಿದ ಪರಿಣಾಮವಾಗಿ ಕೆವಿಜಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್ ಎಂಬವರು ಸ್ಥಳದಲ್ಲೇ ಮೃತಪಟ್ಟರು. ಇನ್ನೋರ್ವ ಸವಾರ ಸಂಭ್ರಮ್ ಎಂಬವರಿಗೆ ಗಾಯವಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಪಘಾತ ಘಟನೆಗೆ ಸಂಬಂಧ ಪಟ್ಟ ಹಾಗೆ ಕಾರು ಚಾಲಕನ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸಹಸವಾರ ಸಂಭ್ರಮ್ ದೂರು ನೀಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸಹಸವಾರ ಸಂಭ್ರಮ್ ನೀಡಿದ ದೂರಿನಲ್ಲಿ “ನಾನು ಸುಳ್ಯದ ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ BAMS ವ್ಯಾಸಂಗ ಮಾಡಿಕೊಂಡಿದ್ದು,ಸುಳ್ಯದ ಜೂನಿಯರ್ ಕಾಲೇಜಿನ ಬಳಿಯಿರುವ ಬ್ಯಾಹ್ಮೀಣ್ಸ್ ಹಾಸ್ಟೇಲ್ನಲ್ಲಿ ಉಳಿದುಕೊಳ್ಳುತ್ತಿದ್ದೇನೆ. ಮೇ 22 ರಂದು ನನ್ನ ಮೋಟಾರ್ ಸೈಕಲಿನಲ್ಲಿ ನನ್ನ ಸ್ನೇಹಿತ ಸ್ವರೂಪ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಂಪಾಜೆಗೆಂದು ಹೊರಟು ಮಾಣಿ ಮೈಸೂರು ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದೆವು.
ಈ ಸಂದರ್ಭ ಸಮಯ ಸುಮಾರು 7-15 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ ಎಂಬಲ್ಲಿ ತಲುಪಿದಾಗ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ನಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಬಲಬದಿಗೆ ಡಿಕ್ಕಿ ಉಂಟು ಮಾಡಿದ್ದಾರೆ.
ಪರಿಣಾಮ ನಾನು ಮತ್ತು ಸ್ನೇಹಿತ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಕೂಡಲೇ ಸ್ಥಳೀಯರು ಉಪಚರಿಸಿ ನೋಡಿದಾಗ ನನ್ನ ಪಕ್ಕೆಲುಬಿಗೆ ತರಚಿದ ಗಾಯ, ಬಲಕೈಗೆ ಗುದ್ದಿದ ನೋವು ಗಾಯವಾಗಿದ್ದು, ಸ್ವರೂಪ್ ನ ತಲೆಗೆ ಗಾಯವಾಗಿದ್ದು, ಪ್ರಜ್ಞೆ ತಪ್ಪಿತ್ತು. ಆಗ ಅಲ್ಲಿಗೆ ಬಂದ ನಮ್ಮ ಸ್ನೇಹಿತರಾದ ಪ್ರಜ್ವಲ್, ಮನೋಜ್, ಅಜಯ್, ಜೀವನ್ ಎಂಬವರು ಅವರನ್ನು ಅಂಬ್ಯಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಸ್ವರೂಪ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ನನಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ನನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ . ಅಪಘಾತ ಉಂಟು ಮಾಡಿದ ಕಾರಿನ ನಂಬ್ರವನ್ನು ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಬೆಳಕಿನಲ್ಲಿ ನೋಡಿದ್ದು, ಅದರ ನೋಂದಣಿ ನಂಬ್ರ KL14J2790 ಆಗಿದ್ದು, ವ್ಯಾಗನರ್ ಕಾರು ಆಗಿದೆ. ಚಾಲಕನ ಹೆಸರು ಸತೀಶ್ ಎಂಬುದಾಗಿದ್ದು, ಮುಂದಕ್ಕೆ ನೋಡಿದರೆ ಗುರುತಿಸುವುದಾಗಿಯೂ, ಈ ಅಪಘಾತಕ್ಕೆ KL14J2790 ನೇ ಕಾರು ಚಾಲಕ ತನ್ನ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಡಿಕ್ಕಿಉಂಟು ಮಾಡಿರುವುದೇ ಕಾರಣವಾಗಿದ್ದು, ಆತನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಮಾಡುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.’ ಎಂದು ದೂರು ನೀಡಿದ್ದಾರೆ.