ನ್ಯೂಸ್ ನಾಟೌಟ್ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ ಎಂದು ವರದಿ ತಿಳಿಸಿದೆ.
ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ ಎನ್ನಲಾಗಿದೆ.
ಉದ್ಯಾವರ ಸಂಪಿಗೆನಗರದ ರಾಹಿಲ್ ಅವರಿಗೆ ಸೇರಿದ ಸೀ ಬರ್ಡ್ ಬೋಟ್ ಮೇ 21ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಾಳಿ-ಮಳೆ ಆರಂಭವಾಗಿದ್ದು, ಪರಿಣಾಮ ನಾವಿಕನ ನಿಯಂತ್ರಣ ತಪ್ಪಿ ಬೋಟ್ ಬಂಡೆಗೆ ಬಡಿದಿದೆ. ಈ ವೇಳೆ ನೀರು ಒಳಗೆ ತುಂಬಿ ಬೋಟ್ ಮುಳುಗಿದೆ.
ಸಮೀಪದಲ್ಲಿದ್ದ “ಪವನ ಪುತ್ರ 111” ಎಂಬ ಬೋಟಿನವರು ಧಾವಿಸಿ ಬಂದು ಈ ಬೋಟನ್ನು ಹಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನ ಪಟ್ಟರು. ಆಗ ಹಗ್ಗ ತುಂಡಾಗಿ ಬೋಟು ಸಂಪೂರ್ಣ ಮುಳುಗಡೆಗೊಂಡಿದೆ.