ಬೆಂಗಳೂರು : ಹಿರಿಯ ನಟ ಸತ್ಯಜಿತ್ (72) ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಜಿತ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿದೆ. ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದ್ದು, ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 2 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಪುತ್ರ ಆಕಾಶ್ ತಿಳಿಸಿದ್ದಾರೆ. ಸತ್ಯಜಿತ್ 600 ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆ ಪೋಷಕ ನಟನಾಗಿ ಸತ್ಯಜಿತ್ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಸತ್ಯಜಿತ್ ಅಭಿನಯಿಸುತ್ತಿದ್ದರು.
‘ಅರುಣ ರಾಗ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನಮ್ಮೂರ ರಾಜ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದರು.