ನ್ಯೂಸ್ ನಾಟೌಟ್: ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದು ಮಾಡಬೇಕು ಮತ್ತು ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆ ಪತ್ರದ ಮೂಲಕ ಒತ್ತಾಯಿಸಿದೆ.
ಕೇಂದ್ರದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ಯನ್ನು (ಎನ್ಇಪಿ) ಸಾರಾಸಗಟಾಗಿ ತಿರಸ್ಕರಿಸಬೇಕು ಹಾಗೂ ‘ರಾಜ್ಯ ಶಿಕ್ಷಣ ನೀತಿ’ ರೂಪಿಸಿ ಜಾರಿಗೊಳಿಸಬೇಕೆಂದು ಕೂಡ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ ಎನ್ನಲಾಗಿದೆ.
ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ ಪೋಷಕ, ಶಿಕ್ಷಣ ತಜ್ಞ ವಿ.ಪಿ.ನಿರಂಜನರಾಧ್ಯ ಪತ್ರ ಬರೆದಿದ್ದು, ” ಈ ಮೊದಲು ಆಡಳಿತ ನಡೆಸಿದ್ದ ಬಿಜೆಪಿ ಶಿಕ್ಷಣ ಕ್ಷೇತ್ರವನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಆಗುವವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಪರಿಷ್ಕೃತ ಪಠ್ಯವನ್ನು ಕೈಬಿಟ್ಟು, 2017-18ರಲ್ಲಿ ಜಾರಿಯಲ್ಲಿದ್ದ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳನ್ನು ಮುಂದುವರೆಸಬೇಕು, ಮತ್ತು ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅಸಂವಿಧಾನಿಕವಾಗಿದ್ದು, ವಿಧಾನಸಭೆಯಲ್ಲಿ ನಡೆಯುವ ಮೊದಲ ಅಧಿವೇಶನದಲ್ಲೇ ಇದನ್ನು ತಿರಸ್ಕರಿಸುವಂತೆ ಆಗ್ರಹಿಸಲಾಗಿದ್ದು, ಈಗಾಗಲೇ ಮುದ್ರಣಗೊಂಡಿರುವ ಕನ್ನಡ ಮತ್ತು ಇತಿಹಾಸ ಪುಸ್ತಕಗಳನ್ನು ಸ್ಥಗಿತಗೊಳಿಸಬೇಕು. ಸರಿಯಾದ ಆದೇಶ ಕೂಡ ಇಲ್ಲದೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪಠ್ಯಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ದ ಖಜಾನೆಗೆ ಕೋಟ್ಯಂತರ ನಷ್ಟ ಉಂಟು ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಆ ಹಣವನ್ನು ವಸೂಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
- +91 73497 60202
- [email protected]
- November 1, 2024 7:57 PM