ನ್ಯೂಸ್ ನಾಟೌಟ್: ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ೮ ಮಂದಿ ಸಚಿವರಾಗಿ ಪ್ರಮಾಣವಚನ ಸ್ವಿಕರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ಹಲವು ಶಾಸಕರು ಗೈರು ಹಾಜರಾಗಿದ್ದು, ಸಂಪುಟ ರಚನೆ ಬಗ್ಗೆ ಅಸಮಾಧಾನದ ಹೊಗೆ ದಟ್ಟವಾಗಿ ಹಬ್ಬಿದೆ ಎನ್ನಲಾಗಿದೆ.
ಪ್ರಮಾಣ ವಚನದ ಬೆನ್ನಲ್ಲೇ ಸಿದ್ದರಾಮಯ್ಯಗೆ ಸಂಪುಟ ಸಂಕಟ ಶುರುವಾಗಿದೆ. ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಹಲವು ಆಪ್ತರು ಗೈರು ಹಾಜರಿ ಹಾಕಿ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಂಪುಟ ಸಂಪೂರ್ಣ ಬೆಂಗಳೂರು ಕೇಂದ್ರಿತ ರಚನೆ ಆಗಿದೆ ಅನ್ನೋ ಆರೋಪ ಇದೆ. ಕಾರಣ 8 ಪ್ಲಸ್ 2 ಕ್ಯಾಬಿನೆಟ್ ನಲ್ಲಿ ಭರ್ತಿ 4 ಜನ ಬೆಂಗಳೂರು ನಗರ, ಗ್ರಾಮಾಂತರ ಪ್ರತಿನಿಧಿಸ್ತಾರೆ ಎನ್ನುವುದು ಗಮನಿಸಬೇಕಾದ ವಿಷಯ.
ಇನ್ನು, ಮೊದಲ ಹಂತದಲ್ಲಿ ಸಂಪುಟ ಭಾಗ್ಯ ಸಿಗದೆ ಇರೋದಕ್ಕೆ ಹಲವು ನಾಯಕರು ಅಸಮಾಧಾನಗೊಂಡು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ.
ಸಿದ್ದು ಆಪ್ತರಾದ ಕೆ.ಎನ್ ರಾಜಣ್ಣ, ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ರಿಜ್ವಾನ್ ಅರ್ಷದ್ ಸೇರಿ ಹಲವು ಶಾಸಕರು ಕಾರ್ಯಕ್ರಮ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ಬೇಸರಗೊಂಡ ಮಧು ಬಂಗಾರಪ್ಪ ಕೂಡ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎನ್ನಲಾಗಿದೆ.