ನ್ಯೂಸ್ ನಾಟೌಟ್: ಚಾರ್ಮಾಡಿ ಪರಿಸರದಲ್ಲಿ ಕಾಡಾನೆ ಹಾವಳಿ ದಿನೇ ದಿನ ಹೆಚ್ಚಾಗುತ್ತಿದೆ. ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಿಂದ ಸಮೀಪದ ಗ್ರಾಮ ಹೊಸಮಠ ಪರಿಸರದ ಕೃಷಿತೋಟಗಳಿಗೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಅಪಾರ ಪ್ರಮಾಣದಲ್ಲಿ ಕೃಷಿಯನ್ನು ಹಾನಿಗೊಳಿಸಿದೆ.
ಮೃತ್ಯುಂಜಯ ನದಿಯ ಮೂಲಕ ಆಗಮಿಸಿದ ಆನೆಗಳು ಹೊಸಮಠ ಪರಿಸರದ ಚಂದ್ರನ್ ಅವರ ತೋಟದಲ್ಲಿ 114 ಅಡಿಕೆ ಮರಗಳು, ಸಿಂಧೂ ರವಿ ಅವರ ತೋಟದ 36 ಅಡಿಕೆ ಮರಗಳು ಹಾಗೂ ಪುರುಷೋತ್ತಮ ಅವರ ತೋಟದ 33 ಅಡಿಕೆ ಮರಗಳನ್ನು ಮುರಿದು ಹಾಕಿವೆ.
ಹಾನಿಯಾದ ಕೃಷಿ ತೋಟಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಡಿರುದ್ಯಾವರ ಗ್ರಾಮದ ಸಿರಿಬೈಲು ಕಿರಣ ಹೆಬ್ಬಾರ್ ಅವರ ತೋಟಕ್ಕೆ ಬುಧವಾರ ತಡರಾತ್ರಿ ಒಂಟಿ ಸಲಗ ದಾಳಿ ನಡೆಸಿ 15ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೈದಿದೆ. ಬುಧವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲಿ ಒಂಟಿ ಸಲಗ ಕಂಡು ಬಂದು ಹಲವು ಹೊತ್ತು ಸಂಚಾರ ವ್ಯತ್ಯಯವಾಗಿತ್ತು.