ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ.ಇದೀಗ ಕಾಡಾನೆಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು,ಮನೆ ಕಾಂಪೌಂಡ್ ಬಳಿ ಬಂದು ದಾಂಧಲೆ ನಡೆಸುತ್ತಿದೆ.ಮಾತ್ರವಲ್ಲ ಮನೆ ಗೇಟು ಮುರಿದು ಕಾಫಿ,ಅಡಿಕೆ ಬೆಳೆಗಳನ್ನು ದ್ವಂಸ ಮಾಡುತ್ತಿವೆ.
ಈ ಘಟನೆ ನಡೆದಿದ್ದು,ಮಡಿಕೇರಿಯ ವೀರಾಜಪೇಟೆ ತಾಲೂಕಿನ ಪುಲಿಯೇರಿ ಗ್ರಾಮದಲ್ಲಿ ಎಂದು ತಿಳಿದು ಬಂದಿದೆ.ಬೆಳೆಗಾರ ಚೋವಂಡ ವಾಸು ಪೊನ್ನಪ್ಪ ಅವರ ಕಾಂಪೌಂಡ್ನ ಗೇಟನ್ನು ಧ್ವಂಸ ಮಾಡಿ ಮನೆಯಂಗಳಕ್ಕೆ ಲಗ್ಗೆ ಇಟ್ಟಿವೆ ಎಂದು ವರದಿಯಾಗಿದೆ.ರಾತ್ರಿ ತೋಟಕ್ಕೆ ನುಗ್ಗಿ ಕಾಫಿ, ಅಡಿಕೆ ಬೆಳೆಗಳನ್ನು ನಾಶಪಡಿಸಿವೆ ಎಂದು ತಿಳಿದು ಬಂದಿದೆ.
ಕಳೆದೆರಡು ದಿನಗಳಿಂದ ಇದೇ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಎಂದು ಸ್ಥಳೀಯರು ಮಾಹಿತಿ ನೀಡಿದ್ದು,ಅವರನ್ನು ಆತಂಕಕ್ಕೂ ತಳ್ಳಿ ಹಾಕಿದೆ. ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.