ನ್ಯೂಸ್ ನಾಟೌಟ್ :ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ, ಸಂಪ್ಯ ಎಸ್ಐ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಲ್ಲೆಗೊಳಗಾದ ಕಾರ್ಯಕರ್ತ ಈ ಹೇಳಿಕೆಯೊಂದನ್ನು ಕೊಟ್ಟಿದ್ದು, ಹೊಟ್ಟೆ, ತೊಡೆ, ತಲೆ, ಮೊಣಕಾಲಿಗೆ ಹೊಡೆದಿದ್ದಾಗಿ ಹೇಳಿದ್ದರು.ರಾತ್ರಿ ವೇಳೆ ಅರುಣ್ ಪುತ್ತಿಲ ಬರದೇ ಇರುತ್ತಿದ್ದರೆ ಲಾಕಪ್ ಡೆತ್ ಆಗುತ್ತಿತ್ತು ಎಂಬ ವಿಷಯವನ್ನು ಬಿಚ್ಚಿಟ್ಟಿದ್ದು, ಡಿವೈಎಸ್ಪಿ ಅಧಿಕಾರಿಯಿಂದಲೇ ಇತರ ಪೊಲೀಸರ ಜೊತೆಗೂಡಿ ಹಲ್ಲೆ ಆರೋಪ ಕೇಳಿ ಬಂದಿದೆ.
ಎಫ್ಐಆರ್ ದಾಖಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಆಸ್ಪತ್ರೆಗೆ ಭೇಟಿಯಿತ್ತ ಅರುಣ್ ಪುತ್ತಿಲ ಅವರು ಎಸ್ಪಿಗೆ ಎಚ್ಚರಿಕೆ ನೀಡಿದ್ದರು. ಘಟನೆ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಉಳಿದಿರುವ ತನಿಖೆ ವಹಿಸ್ಕೊಂಡ ಎಸ್ಪಿ ವಿಕ್ರಮ್ ಅಮ್ಟೆ ಅವರು ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಏಳು ಮಂದಿ ಕಾರ್ಯಕರ್ತರ ಮೇಲೆ ಪೊಲೀಸರು ಯದ್ವಾತದ್ವಾ ಥಳಿಸಿ, ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಗೊಳಗಾದ ಅವಿನಾಶ್ ಮತ್ತು ಗುರುಪ್ರಸಾದ್ ಎಂಬವರು ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸ್ಥಳದಿಂದಲೇ ಎಸ್ಪಿ ವಿಕ್ರಂ ಅಮಟೆ ಅವರಿಗೆ ಫೋನಾಯಿಸಿ ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದರು. ಪೊಲೀಸರ ವಿರುದ್ಧ ಕ್ರಮ ಜರುಗಿಸದಿದ್ದರೆ, ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು. ಅವರೊಂದಿಗೆ ಅರುಣ್ ಪುತ್ತಿಲ ಮತ್ತಿತರರು ಕೂಡ ಜೊತೆಗಿದ್ದರು.