ನ್ಯೂಸ್ ನಾಟೌಟ್: ಫೇಸ್ಬುಕ್, ಟ್ವಿಟರ್ ಸೇರಿ ಹಲವು ಜಾಲತಾಣಗಳಲ್ಲಿ ಶೆಹಬಾಜ್ ಷರೀಫ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಎಲ್ಲೆಡೆ ಹರಿದಾಡುತ್ತಿತ್ತು. “ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ ಕರ್ನಾಟಕದ ಜತೆಗೆ ಅಭಿನಂದನೆಗಳು” ಎಂಬುದಾಗಿ ಅವರು ಮೇ 13ರಂದು ಟ್ವೀಟ್ ಮಾಡಿದ್ದಾರೆ ಎಂಬುದರ ಫೋಟೊ ಹರಿದಾಡುತ್ತಿದೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಮೇ 7ರಂದು ಕೂಡ “2047ರ ವೇಳೆಗೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಬೇಕು. ಅದಕ್ಕಾಗಿ ಎಲ್ಲರೂ ಕಾಂಗ್ರೆಸ್ಗೆ ಮತ ನೀಡಿ” ಎಂಬುದಾಗಿಯೂ ಟ್ವೀಟ್ ಮಾಡಿದ್ದಾರೆ ಎಂಬ ಫೋಟೊ ಹರಿದಾಡುತ್ತಿದ್ದವು ಎನ್ನಲಾಗಿದೆ. ನ್ಯೂಸ್ಚೆಕ್ಕರ್ ಎಂಬ ಫ್ಯಾಕ್ಟ್ಚೆಕ್ ಸಂಸ್ಥೆಯು ಈ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡಿ ನೋಡಿದ ಮೇಲೆ ಸತ್ಯಾಸತ್ಯತೆ ಹೊರಬಿದ್ದಿದೆ.
ಶೆಹಬಾಜ್ ಷರೀಫ್ ಹಾಗೆ ಟ್ವೀಟ್ ಮಾಡಿಲ್ಲ ಎಂಬುದು ದೃಢಪಟ್ಟಿದೆ. ಮೇ 13ರಂದು ಶೆಹಬಾಜ್ ಷರೀಫ್ ಅವರು ಮೂರು ಟ್ವೀಟ್ ಮಾಡಿದ್ದಾರೆ. ಅವುಗಳಲ್ಲಿ ಯಾವುದೇ ಟ್ವೀಟ್ ಕೂಡ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದೆ. ಜನರು ಕೂಡ, ಷರೀಫ್ ಅವರ ಟ್ವಿಟರ್ ಖಾತೆಯನ್ನು ಪರಿಶೀಲಿಸಿದ್ದು, ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಟ್ವೀಟ್ ಲಭ್ಯವಾಗಿಲ್ಲ. ಇನ್ನು ಮೇ 7ರಂದು ಕೂಡ ಪಾಕ್ ಪ್ರಧಾನಿ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಟ್ವೀಟ್ ಮಾಡಿಲ್ಲ ಎಂದು ವರದಿ ತಿಳಿಸಿದೆ.