ನ್ಯೂಸ್ ನಾಟೌಟ್ : ಕಳ್ಳತನದ ಶಂಕೆಯ ಮೇಲೆ ಬಿಹಾರ ಮೂಲದ ವ್ಯಕ್ತಿಯನ್ನು ಕೊಂದಿದ್ದಕ್ಕಾಗಿ ಕೇರಳ ಪೊಲೀಸರು ಸೋಮವಾರ ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಮಲಪ್ಪುರಂನ ಕೀಜಿಸ್ಸೆರಿಯಲ್ಲಿ 36 ವರ್ಷದ ರಾಜೇಶ್ ಮಂಚಿ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಮಲಪ್ಪುರಂ ಎಸ್ಪಿ ಸುಜಿತ್ ದಾಸ್ ತಿಳಿಸಿದ್ದಾರೆ. ಆರೋಪಿಗಳು ಪೈಪ್ ಮತ್ತು ಮರದ ಕೋಲುಗಳನ್ನು ಬಳಸಿ ರಾಜೇಶ್ ಮಂಚಿ ಎಂಬಾತನಿಗೆ ಥಳಿಸಿದ್ದಾರೆ. ಮೇ 12ರ (ಶುಕ್ರವಾರ) ರಾತ್ರಿ ರಾಜೇಶ್ ಮಂಚಿ ಅವರ ಮೃತದೇಹ ಕೀಜಿಶ್ಸೆರಿಯಲ್ಲಿ ಪತ್ತೆಯಾಗಿತ್ತು ಮತ್ತು ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆರೋಪಿಗಳು ರಾಜೇಶ್ ಮಂಚಿಗೆ ಕೈ ಕಟ್ಟಿ ಎರಡು ಗಂಟೆಗೂ ಹೆಚ್ಚು ಕಾಲ ದೊಣ್ಣೆ, ಪೈಪುಗಳಿಂದ ಚಿತ್ರಹಿಂಸೆ ನೀಡಿ ಕಳ್ಳತನ ಮಾಡಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆರೋಪಿಗಳು ಕೃತ್ಯವನ್ನು ಚಿತ್ರೀಕರಿಸಿದ್ದು, ವಿಡಿಯೋ ಇದೀಗ ಪೊಲೀಸರ ಬಳಿ ಇದೆ.
ಘಟನೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಶ್ ಮಂಚಿ ಅವರನ್ನು ಕಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ರಾಜೇಶ್ ಮಂಚಿ ಕಳ್ಳ ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಕೊಂಡೊಟ್ಟಿ ಎಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದ್ದಾರೆ.