ನ್ಯೂಸ್ ನಾಟೌಟ್ : ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಎಲ್ಲಾ ಕಡೆ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿವೆ.ಬಿಜೆಪಿ ಹೀನಾಯವಾಗಿ ಸೋಲಲು ಕಾರಣವೇನು ಎಂಬ ಲೆಕ್ಕಾಚಾರಗಳು ನಡಿತಿವೆ.ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಇದೀಗ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊರಲು ಸಿದ್ಧರಾಗಿರುವ ಕಟೀಲ್ ಅವರು ಸೋಮವಾರ (ಮೇ 15) ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗಿದೆ. ತಾವು ರಾಜೀನಾಮೆ ಕೊಡುತ್ತಿರುವುದಾಗಿ ಈಗಾಗಲೇ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ನಳಿನ್ ಕುಮಾರ್ ಕಟೀಲ್ ಅವರ ತವರು ಪುತ್ತೂರಲ್ಲಿ ಬಿಜೆಪಿ ಮುಗ್ಗರಿಸಿದೆ. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದ್ದು,ಈ ರೀತಿಯ ಸೋಲು ಆಗುತ್ತದೆನ್ನುವ ನಿರೀಕ್ಷೆಯು ಕಟೀಲ್ ಅವರಿಗೆ ಇರಲಿಲ್ಲ.ಇದು ಕಟೀಲ್ ಅವರಿಗೆ ಇನ್ನಷ್ಟು ಮುಜುಗರ ಉಂಟು ಮಾಡಿರುವ ಸಂಗತಿಯಾಗಿದೆ.ಬಿಜೆಪಿಗೆ ಹಿನ್ನಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಸವರಾಜ ಬೊಮ್ಮಾಯಿ ‘ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಜನರ ಆದೇಶಕ್ಕೆ ತಲೆಬಾಗುತ್ತೇನೆ’ ಎಂದಿದ್ದರು. ಇದೀಗ ನಳಿನ್ ಕುಮಾರ್ ಕಟೀಲ್ ಕೂಡ ಇದನ್ನೇ ಹೇಳಿದ್ದಾರೆ.ಇಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸೋಲು-ಗೆಲುವಿನ ಪರಾಮರ್ಶೆ ನಡೆದಿದೆ. ಸಭೆಯಲ್ಲಿ ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಮುನಿರತ್ನ, ಬೈರತಿ ಬಸವರಾಜ್, ಶಾಸಕರಾದ ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದಾರೆ.