ನ್ಯೂಸ್ ನಾಟೌಟ್ : ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧವನ್ನು ನಮ್ಮ ಸರ್ಕಾರ ಹಿಂಪಡೆಯಲಿದೆ ಎಂದು ರಾಜ್ಯದ ಏಕೈಕ ಮುಸ್ಲಿಂ ಮಹಿಳಾ ಶಾಸಕಿ ಕನೀಜ್ ಫಾತಿಮಾ ಮೆ 14 ರಂದು ತಿಳಿಸಿದ್ದಾರೆ. ಕಲಬುರಗಿ ಉತ್ತರದ ಹಾಲಿ ಕಾಂಗ್ರೆಸ್ ಶಾಸಕಿಯಾಗಿದ್ದ ಫಾತಿಮಾ, ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.
ನಾವು ಮುಂಬರುವ ದಿನಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ನಾವು ಆ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನೀಡುತ್ತೇವೆ. ಅವರು ತಮ್ಮ ಪರೀಕ್ಷೆಗಳಿಗೆ ಹಿಜಾಬ್ ಸಹಿತ ಹಾಜರಾಗಲು ಸಾಧ್ಯವಾಗುತ್ತದೆ. ಅವರು ಈ ಹಿಂದಿನ ಅಮೂಲ್ಯವಾದ ಎರಡು ವರ್ಷಗಳ ಸಮಯವನ್ನು ಕಳೆದುಕೊಂಡಿದ್ದಾರೆ ಎಂದು ಫಾತಿಮಾ ತಿಳಿಸಿದ್ದಾರೆ.
ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರನ್ನು 2,712 ಮತಗಳಿಂದ ಸೋಲಿಸಿದ್ದಾರೆ. 2018 ರ ಚುನಾವಣೆಯಲ್ಲೂ ಫಾತಿಮಾ ಅವರು ಇದೇ ಚಂದ್ರಕಾಂತ್ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು ಎನ್ನಲಾಗಿದೆ.
“ನಾನೂ ಹಿಜಾಬ್ ಧರಿಸಿ ವಿಧಾನಸಭೆಯಲ್ಲಿ ಕುಳಿತುಕೊಳ್ಳುತ್ತೇನೆ. ಯಾರಿಗಾದರೂ ಧೈರ್ಯವಿದ್ದರೆ ನನ್ನನ್ನು ತಡೆದು ತೋರಿಸಲಿ. ಹಿಜಾಬ್ ಧರಿಸಲು ಬಯಸುವವರು ಅದನ್ನು ಧರಿಸುವುದನ್ನು ಮುಂದುವರಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಮತ್ತು ತಡೆಯುವ ಹಕ್ಕು ಯಾರಿಗೂ ಇಲ್ಲ” ಎಂದು ಫಾತಿಮಾ ಕಳೆದ ವರ್ಷ ಹಿಜಾಬ್ ಗಲಾಟೆ ಸಮಯದಲ್ಲಿ ಹೇಳಿಕೆ ನೀಡಿದ್ದರು.