ನ್ಯೂಸ್ ನಾಟೌಟ್: ಬೆಳ್ಳಂ ಬೆಳಗ್ಗೆ ನಡು ರಸ್ತೆಯಲ್ಲಿ ಭೀಕರ ಅಪಘಾತ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಅಪಘಾತದ ರಬಸಕ್ಕೆ ಬೈಕ್ ಒಂದಷ್ಟು ದೂರ ಹೋಗಿ ಬಿದ್ದಿದೆ ಎಂದು ವರದಿ ತಿಳಿಸಿದೆ.
ಕಾರಿನ ಮುಂಭಾಗ ನಜ್ಜು-ಗುಜ್ಜಾಗಿದೆ. ಇಂತಹ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ದುರ್ದೈವಿಗಳು ನಾಗರಾಜ್ ಮತ್ತು ರಾಮಯ್ಯ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಚಲ್ಲಹಳ್ಳಿ ಗ್ರಾಮದವರಾದ ಇವರು ರಾಜಾನುಕುಂಟೆಯ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ(ಮೇ.11) ಬೆಳಗ್ಗೆ ಎಂದಿನಂತೆ ಗ್ರಾಮದಿಂದ ಇಬ್ಬರು ಸ್ನೇಹಿತರು ಕಾಕೋಳು ರಸ್ತೆ ಮೂಲಕ ಕೆಲಸಕ್ಕೆಂದು ಬೈಕ್ ನಲ್ಲಿ ಹೊರಟಿದ್ದರು.
ಈ ವೇಳೆ ಚಲ್ಲಹಳ್ಳಿ ಗೇಟ್ ಬಳಿ ಕಾಕೋಳು ರಸ್ತೆಯಲ್ಲಿ ಬಂದ ಸ್ವಿಪ್ಟ್ ಕಾರು ನೋಡ ನೋಡುತ್ತಿದ್ದಂತೆ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಬಸಕ್ಕೆ ಬೈಕ್ ಒಂದಷ್ಟು ದೂರ ಹೋಗಿ ಬಿದ್ದು, ಬೈಕ್ನಲ್ಲಿದ್ದವರು ಸ್ಥಲದಲ್ಲೇ ಸಾವನ್ನಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಮೆಲ್ನೂಟಕ್ಕೆ ಅಚಾನಕ್ಕಾಗಿ ಆದ ಅಪಘಾತ ಅಂತಲೇ ಎಲ್ಲರೂ ಅಂದುಕೊಂಡು ರಾಜಾನುಕುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬಾಡಿಗಳನ್ನ ಶಿಪ್ಟ್ ಮಾಡಿಸಿ ಕಾರು ಚಾಲಕ ಭರತ್ ಎಂಬುವವನನ್ನ ವಶಕ್ಕೆ ಪಡೆದಿದ್ದಾರೆ.
ಠಾಣೆ ಮುಂದೆ ಜಮಾಯಿಸಿದ ಸಂಬಂಧಿಕರು ಅಪಘಾತದ ಕೇಸ್ಗೆ ಕೊಲೆ ಎನ್ನುವ ಅನುಮಾನದ ವ್ಯಕ್ತಪಡಿಸಿದ್ದಾರೆ. ಮೃತ ನಾಗರಾಜ್ ಮತ್ತು ರಾಮಯ್ಯ ಕಳೆದ ಹಲವು ವರ್ಷಗಳಿಂದ ಜೊತೆಯಲ್ಲೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಕಳೆದ ವಾರ ಕೆಲಸ ಮುಗಿಸಿಕೊಂಡು ಹೋಟೆಲ್ ಒಂದರ ಬಳಿ ಹೋಗಿ ಊಟ ಮಾಡಿ ನೀರು ಕುಡಿಯುತ್ತಿದ್ದ ವೇಳೆ ಕಾರು ಚಾಲಕ ಆರೋಪಿ ಭರತ್ ಜಾತಿ ನಿಂದನೆ ಮಾಡಿ ಗಲಾಟೆ ಮಾಡಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದ ಎಂದು ನಾಗರಾಜ್ ತಂದೆ ಆರೋಪಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.