ನ್ಯೂಸ್ ನಾಟೌಟ್: ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಕಲ ಸಿದ್ಧತೆಗಳನ್ನು ನಡೆಸಿದೆ. ಜೆಡಿಎಸ್ಗೆ ಬಿಜೆಪಿ ಅಥವಾ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅಸಮಾಧಾನವಿಲ್ಲ. ನಮ್ಮ ಪ್ರಮುಖ ಷರತ್ತುಗಳನ್ನು ಪೂರೈಸುವ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿಗೆ ನಾವು ಸಿದ್ಧ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಅಲ್ಲದೆ ಎಕ್ಸಿಟ್ ಪೋಲ್ಗಳ ಕುರಿತು ಮಾತನಾಡಿರುವ ಅವರು ಜೆಡಿಎಸ್ ಪಾರ್ಟಿಗೆ ಬಹಳ ಕಡಿಮೆ ಸೀಟ್ಗಳು ಸಿಗುತ್ತವೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ. ಆದರೆ ನನಗೆ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ ಎಂದು ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಷರತ್ತುಗಳೇನು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಜೆಡಿಎಸ್ ಶಾಸಕರಿಗೆರು ಜಲಸಂಪನ್ಮೂಲ, ವಿದ್ಯುತ್ ಮತ್ತು ಸಾರ್ವಜನಿಕ ಕೆಲಸಗಳಂತಹ ಖಾತೆಗಳನ್ನು ನೀಡಬೇಕು. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ತಮ್ಮ ಷರತ್ತುಗಳ ಬಗ್ಗೆ ವಿವರಿಸಿದ್ದಾರೆ.
ಮಂಡ್ಯ ವಿಚಾರಕ್ಕೆ ಬರಬೇಡಿ: ಕುಮಾರಸ್ವಾಮಿ ಅವರಿಗೆ 2018ರಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದಾಗ ರಚನೆಯಾದ ಸಮ್ಮಿಶ್ರ ಸಮನ್ವಯ ಸಮಿತಿ ಬೇಕಿಲ್ಲವಂತೆ. ಹಾಗೂ ತಮ್ಮ ಸಮ್ಮಿಶ್ರ ಪಾಲುದಾರ ಪಕ್ಷವು ಮಂಡ್ಯ ಮತ್ತು ಹಾಸನ ಕ್ಷೇತ್ರಗಳಿಂದ ದೂರವಿರಬೇಕು. ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚೆಯಿಲ್ಲದೆ ಮಾಡಬಾರದು ಎಂದು ಕುಮಾರಸ್ವಾಮಿ ತಮ್ಮ ಷರತ್ತುಗಳನ್ನು ತಿಳಿಸಿದ್ದಾರೆ.