ನ್ಯೂಸ್ ನಾಟೌಟ್: ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಅರ್ಚಕನೋರ್ವ ಕುಡಗೋಲಿನಿಂದ ಕೊಚ್ಚಿದ್ದಲ್ಲದೆ, ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ. ಯುವತಿಗೆ ಗಂಭೀರ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ವರದಿ ತಿಳಿಸಿದೆ. ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಭಟ್ಟರಹಳ್ಳಿ ಗ್ರಾಮದ ಕಲ್ಲೆಗೌಡ, ನಳೀನಾಕ್ಷಿ ಎಂಬ ದಂಪತಿ ಮಗಳು 17 ವರ್ಷದ ಜೀವಿತ ಹಲ್ಲೆಗೊಳಗಾದ ಬಾಲಕಿ. ಇದೇ ಗ್ರಾಮದ ಸಿದ್ರಾಮಯ್ಯ ಅಲಿಯಾಸ್ ದೊಡ್ಡೇಗೌಡ ಎಂಬುವರ ಮಗ ವಿನಯ್(25) ದುಷ್ಕೃತ್ಯ ನಡೆಸಿದ ಯುವಕ ಎನ್ನಲಾಗಿದೆ.
ಭಟ್ಟರಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಕೊಂಡಿದ್ದ ವಿನಯ್ ಕಳೆದ ಆರು ತಿಂಗಳಿಂದ ಜೀವಿತಾಳ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಜೀವಿತಾ ತಾಯಿ ಬಳಿ ಹೇಳಿಕೊಂಡಿದ್ದಳಂತೆ, ಪಿಯುಸಿ ಪರೀಕ್ಷೆ ಬರೆಯುವ ವೇಳೆಯೂ ವಿಜಯ್ ಸಾಕಷ್ಟು ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ತಾಯಿ ಆಟೋದಲ್ಲಿ ವ್ಯಕ್ತಿಯೊಬ್ಬರನ್ನ ಕಾವಲಿಗೆ ನೇಮಿಸಿ ಪರೀಕ್ಷೆ ಬರೆಯಲು ಕಳಿಸುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇಷ್ಟಾದರೂ ಬೆನ್ನು ಬಿಡದೆ ಕಾಡುತ್ತಿದ್ದ ಅರ್ಚಕ ವಿನಯ್ ಹೊಂಚುಹಾಕಿ ಗುರುವಾರ ಬೆಳಗ್ಗೆ ಜೀವಿತಾ ಕೊಲೆ ಯತ್ನ ನಡೆಸಿದ್ದಾನೆ.
ಸದ್ಯ ಜೀವಿತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಪೂಜಾರಿ ವಿನಯ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದ ಕುರಿತು ತಾಲೂಕಿನ ಜಿ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬೆಳ್ಳಂಬೆಳಗ್ಗೆ ಬಾಲಕಿ ಜೀವಿತಾ ತನ್ನ ತಾಯಿಯೊಂದಿಗೆ ಮನೆ ಬಾಗಿಲು ಮುಂಭಾಗ ಸ್ವಚ್ಚಗೊಳಿಸಿ, ರಂಗೋಲಿ ಹಾಕುತ್ತಿದ್ದಳು.
ತಾಯಿ ನಳೀನಾಕ್ಷಿ ಮನೆ ಒಳಗೆ ತೆರಳುತ್ತಿದ್ದಂತೆ ಒಂಟಿಯಾಗಿದ್ದ ಜೀವಿತಾ ಮೇಲೆ ಹಲ್ಲೆ ನಡೆಸಿದ ವಿನಯ್ ಕಪಾಳಕ್ಕೆ ಹೊಡೆದು ಕುಡುಗೋಲಿನಿಂದ ಕುತ್ತಿಗೆ ಭಾಗಕ್ಕೆ ಕೊಚ್ಚಿದ್ದಾನೆ. ಬಳಿಕ ಚಾಕುನಿಂದ ಬೆನ್ನಿನ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಾಲಕಿ ಜೀವಿತಾಳ ಕತ್ತಿನ ಭಾಗ ಹೆಚ್ಚು ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದು, ಹೆಚ್ಚಿನ ಚಿಕಿತ್ಸೆ ಹಾಸನಕ್ಕೆ ಕರೆದೊಯ್ಯಲಾಗಿದೆ. ಪೊಲೀಸರ ತನಿಖೆ ನಡೆಯುತ್ತಿದ್ದು, ಆತನ ವಿರುದ್ಧ ಎಫ್ ಐ ಆರ್ ದಾಕಲಿಸಲಾಗಿದೆ.