ನ್ಯೂಸ್ ನಾಟೌಟ್: ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನವೂ ಒಂದು. ಈ ದೇಗುಲಕ್ಕೆ ಉಗ್ರ ಶಾರಿಕ್ ಬಾಂಬ್ ಹಾಕುವ ಪ್ರಯತ್ನ ನಡೆಸಿದ್ದ. ಇದೀಗ ಅನ್ಯಕೋಮಿನ ಮೂವರು ಯುವಕರ ತಂಡ ಕದ್ರಿ ದೇವಸ್ಥಾನದ ಒಳಗೆ ಪ್ರವೇಶಿಸಿ ಪೊಲೀಸರ ಅತಿಥಿಗಳಾಗಿದ್ದಾರೆ. ಗುರುವಾರ ತಡರಾತ್ರಿ ಘಟನೆ ನಡೆದಿದ್ದು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮೂವರ ವಿಡಿಯೋ, ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮೂವರು ಯುವಕರು ನೇರವಾಗಿ ಬೈಕ್ನೊಂದಿಗೆ ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಅನುಮಾನಾಸ್ಪದವಾಗಿ ದೇಗುಲ ಪ್ರವೇಶಿಸಿದವರನ್ನು ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್, ಜಾಫರ್, ಫಾರೂಕ್ನನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಶಂಕಿತ ಉಗ್ರ ಶಾರಿಕ್ ಕದ್ರಿ ದೇಗುಲ ಟಾರ್ಗೆಟ್ ಮಾಡಿದ್ದ. ಕದ್ರಿ ದೇಗುಲದ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ವರ್ಷ ನಡೆದ ಮಂಗಳೂರಿನಲ್ಲಿ ಆಟೋ ರಿಕ್ಷಾವೊಂದರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಹಿಂದೂ ವ್ಯಕ್ತಿಯ ವೇಷದಲ್ಲಿದ್ದ ಮುಸ್ಲಿಂ ಯುವಕನೊಬ್ಬ ಕುಕ್ಕರ್ ನಲ್ಲಿ ಬಾಂಬ್ ಇಟ್ಟು ಬೇರೆಡೆ ಸಾಗಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಅನ್ನುವುದು ಆ ನಂತರ ಬಯಲಿಗೆ ಬಂದಿತ್ತು. ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಶಂಕಿತ ಉಗ್ರ ಟಾರ್ಗೆಟ್ ಮಾಡಿದ್ದ. ಈ ಪೈಕಿ ಕದ್ರಿಯ ದೇಗುಲವೂ ಒಂದು ಎನ್ನುವುದು ತನಿಖೆಯಿಂದ ತಿಳಿದು ಬಂದಿತ್ತು.