ನ್ಯೂಸ್ ನಾಟೌಟ್ : ಬಾನೆತ್ತರಕ್ಕೆ ಹಾರಾಡಿದ ಮಿನಿ ವಿಮಾನಗಳು. ಲೋಹದ ಹಕ್ಕಿಗಳ ಕಲರವಕ್ಕೆ ಫಿದಾ ಆದ ಜನ.ಎಂಜಾಯ್ ಮಾಡಿದ ಮಕ್ಕಳು.ಈ ದೃಶ್ಯ ಕಂಡು ಬಂದಿದ್ದು,ಕೊಡಗಿನ ಬಾಳೆಲೆ ಬಳಿಯ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ. ಮಿನಿ ವಿಮಾನಗಳು ವಿಭಿನ್ನ ರೀತಿಯಲ್ಲಿ ಬಾನಂಗಳದಲ್ಲಿ ಹಾರಾಡಿ ಮತದಾನದ ಮಹತ್ವ ಸಾರುವ ಮೂಲಕ ಕಿಕ್ಕಿರಿದು ಸೇರಿದ್ದ ಜನರ ಗಮನ ಸೆಳೆದವು.
ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಆಶ್ರಯದಲ್ಲಿ ಬಾಳೆಲೆ ಕಾರ್ಮಾಡು ಗ್ರಾಮ ನಿವಾಸಿ ಕೊಳ್ಳಿಮಾಡ ರಾಜಿ ಗಣಪತಿ ಅವರ ಸಂಗ್ರಹದಲ್ಲಿರುವ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಅತ್ಯಾಕರ್ಷಕವಾಗಿ ನಡೆಯಿತು.ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮತ್ತು ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಿನಿ ವಿಮಾನ ಹಾರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಮತದಾನ ಮಹತ್ವ ಸಾರುವ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಿದರು.
ಹೆಚ್ಚು ಕಡಿಮೆ ಒಂದೂವರೆ ಗಂಟೆಗಳ ಕಾಲ ಕಾರ್ಮಾಡು ಗ್ರಾಮದ ಖಾಸಗಿ ಏರ್ಸ್ಟ್ರಿಪ್ ನಲ್ಲಿ ಮಿನಿ ವಿಮಾನಗಳ ಸದ್ದು ಹಾಗೂ ಹಾರಾಟ ರೋಮಾಂಚನಕಾರಿಯಾಗಿತ್ತು.ಮಿನಿ ಸೆಸ್ನಾ, ಎಕ್ಸ್ ಎಫ್ 80, ಎಕ್ಸ್ 380 ಶ್ರೇಣಿಯ ಮಿನಿ ವಿಮಾನಗಳು, ಮಿನಿ ಹೆಲಿಕಾಪ್ಟರ್ ಗಳು, ತ್ರಿಡಿ ವಿಮಾನಗಳು ಕೂಡ ಹಾರಾಟದ ಮೂಲಕ ಗಮನ ಸೆಳೆದಿದ್ದು,ಜನ ಮನರಂಜನೆ ಜತೆಗೆ ಎಲೆಕ್ಷನ್ ಕುರಿತು ಮಾಹಿತಿಯನ್ನೂ ಪಡೆದುಕೊಂಡರು.
ಬೆಂಗಳೂರಿನ ಯುವ ಪೈಲಟ್ ಆದಿತ್ಯ ಪವಾರ್ ತನ್ನ ಕೈಚಳಕದಲ್ಲಿ ಮಿನಿ ವಿಮಾನವನ್ನು ಸಂಗೀತದ ನಾದಕ್ಕೆ ತಕ್ಕಂತೆ ಬಾನಿನಲ್ಲಿ ನೃತ್ಯ ಶೈಲಿಯಲ್ಲಿ ತೇಲಿಸುತ್ತಾ ಪ್ರದರ್ಶನ ನೀಡಲಾಯಿತು.ಇದು ಪ್ರೇಕ್ಷಕರ ಅಪಾರ ಮೆಚ್ಚುಗೆಗೂ ಕಾರಣವಾಯಿತು. ಬೆಂಗಳೂರಿನ ಪೈಲಟ್ ಎಮಿಲ್ ಅವರಿಂದಲೂ ವಿಶಿಷ್ಟ ರೀತಿಯಲ್ಲಿ ಮಿನಿವಿಮಾನಗಳ ಹಾರಾಟ ನಡೆದಿದ್ದು,ಇದನ್ನು ನೋಡುತ್ತಾ ಜನ ಮೈರೆತರು.