ನ್ಯೂಸ್ ನಾಟೌಟ್: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳವಾರ ತಮ್ಮ ಸರಕಾರ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ನಿಷೇಧಿಸುವುದಾಗಿ ಆದೇಶಿಸಿದ್ದಾರೆ.
“ದಿ ಕೇರಳ ಸ್ಟೋರಿ” ಅನ್ನು ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುವುದು” ಎಂದು ಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಮೇ 6 ರಂದು ಮಧ್ಯಪ್ರದೇಶವು ವಿವಾದಾತ್ಮಕ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ಮೊದಲ ರಾಜ್ಯವಾಯಿತು.
ಉತ್ತರಾಖಂಡದ ಬಿಜೆಪಿ ಸರಕಾರವು ರಾಜ್ಯದಲ್ಲಿ ಅದಾ ಶರ್ಮಾ ಅಭಿನಯದ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದಿ ಕೇರಳ ಸ್ಟೋರಿಯನ್ನು ನಿಷೇಧಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರಕಾರ ಸೋಮವಾರ ಪ್ರಕಟಿಸಿದ್ದು, ರಾಜ್ಯದಲ್ಲಿ “ಶಾಂತಿಯನ್ನು ಕಾಪಾಡಲು” ಹಾಗೂ ಹಿಂಸಾಚಾರವನ್ನು ತಪ್ಪಿಸಲು ನಿಷೇಧಿಸುವ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.