ನ್ಯೂಸ್ ನಾಟೌಟ್: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮದುವೆಯಾದ ಮೇಲೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ ಎನ್ನುವ ಪ್ರಶ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಇದಕ್ಕೆ ಖುಷ್ಬೂ ಸುಂದರ್ ಟ್ವಿಟರ್ನಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. “ನನ್ನ ಮದುವೆಯನ್ನು ಪ್ರಶ್ನಿಸುವವರು ಅಥವಾ ನನ್ನ ಪತಿಯನ್ನು ಮದುವೆಯಾಗಲು ನಾನು ಮತಾಂತರಗೊಂಡಿದ್ದೇನೆ ಎಂದು ಹೇಳುವವರು, ದಯವಿಟ್ಟು ಇಲ್ಲಿ ಕೇಳಿ. ದುಃಖಕರ ವಿಚಾರ ಏನೆಂದರೆ, ನಮ್ಮ ದೇಶದಲ್ಲಿ ಅನೇಕರಿಗೆ ಅಸ್ತಿತ್ವದಲ್ಲಿರುವ ‘ವಿಶೇಷ ವಿವಾಹ ಕಾಯ್ದೆ’ ಬಗ್ಗೆ ಗೊತ್ತಿಲ್ಲ. ನಾನು ಮತಾಂತರಗೊಂಡಿಲ್ಲ. ಹಾಗೆ ಮಾಡುವಂತೆ ನನ್ನನ್ನು ಯಾರೂ ಕೇಳಿಕೊಂಡಿಲ್ಲ. ನನ್ನ 23 ವರ್ಷಗಳ ದಾಂಪತ್ಯವು ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯನ್ನು ಆಧರಿಸಿದೆ. ಹಾಗಾಗಿ ಸಂದೇಹ ಇರುವವರು, ದಯವಿಟ್ಟು ಯಾವುದಾದರೂ ಟ್ರಿಪ್ಗೆ ಹೋಗಿ” ಎಂದು ಬರೆದುಕೊಂಡಿದ್ದಾರೆ.
ಮೂಲತ: ಮುಂಬೈಯ ಮುಸ್ಲಿಂ ಕುಟುಂಬದಲ್ಲಿ ನಖತ್ ಖಾನ್ ಆಗಿ ಜನಿಸಿದ್ದ ಖುಷ್ಬೂ ನಂತರ ಅವರು ನಟಿಯಾಗಿ ಕೆಲಸ ಆರಂಭಿಸಿದ್ದರು. ಕ್ರಮೇಣ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು. ನಿರೂಪಕಿಯಾಗಿಯೂ ಕೆಲಸ ಮಾಡಿದ್ದ ಇವರು ಬಿಜೆಪಿ ಸೇರಿದ್ದರು. ಇವರು ತಮಿಳಿನಲ್ಲಿ 34ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸುಂದರ್ ಸಿ .ಅವರನ್ನು ಮದುವೆಯಾಗಿದ್ದರು. ಆ ನಂತರ ಅವರು ತಮ್ಮ ಹೆಸರನ್ನು ಖುಷ್ಬೂ ಸುಂದರ್ ಎಂದು ಬದಲಾಯಿಸಿಕೊಂಡಿದ್ದರು.