ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಸುಳ್ಯದ ಅಜ್ಜಾವರ ಭಾಗದಲ್ಲಿ ನಾಲ್ಕು ಕಾಡಾನೆಗಳ ಹಿಂಡೊಂದು ಕೆರೆಗೆ ಬಿದ್ದು ಲಾಕ್ ಆಗಿದ್ದ ಘಟನೆ ವರದಿಯಾಗಿತ್ತು.ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಹಕಾರದಿಂದ ಆನೆಗಳನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಲಾಗಿತ್ತು.ಇದೀಗ ಮಂಡೆಕೋಲು ಗ್ರಾಮದಲ್ಲಿ ಕಾಡುಕೋಣವೊಂದು ಆನೆಕಂದಕಕ್ಕೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಕೇನಾಜೆಯಿಂದ ವರದಿಯಾಗಿದೆ.
ಕಾಡುಕೋಣ ತೋಟಕ್ಕೆ ಬಂದು ವಾಪಸು ಕಾಡಿಗೆ ಹೋಗುವಾಗ ತೋಟದಿಂದ ಹಾರಿದ್ದು ಆನೆಕಂದಕಕ್ಕೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿದೆ ಎನ್ನಲಾಗಿದೆ. ಮಂಡೆಕೋಲು ಕುಸುಮಾಧರ ಮಾವಜಿಯವರ ತೋಟದಲ್ಲಿ ಸಂಜೆ ಸುಮಾರು 5.30 ರ ವೇಳೆಗೆ ಕಾಡುಕೋಣ ಇದ್ದಿರುವುದು ಗಮನಕ್ಕೆ ಬಂದಿದೆ.ಸುಮಾರು 8 ವರ್ಷ ಪ್ರಾಯದ ಕಾಡು ಕೋಣ ಎಂದು ಅಂದಾಜಿಸಲಾಗಿದೆ.
ಆದರೆ ಅದು ತೋಟದಿಂದ ಕಾಡಿಗೆ ಹೋಗುತ್ತಿದ್ದ ವೇಳೆ ತೋಟ ಮತ್ತು ಕಾಡಿನ ಮಧ್ಯೆ ಮಾಡಲಾಗಿದ್ದ ಆನೆ ಕಂದಕವನ್ನು ಹಾರಿದ್ದು ಈ ವೇಳೆ ಆಯ ತಪ್ಪಿ ಕಂದಕಕ್ಕೆ ಬಿದ್ದು ಅದರ ಕಾಲುಗಳು ಕಂದಕದಲ್ಲಿದ್ದ ಕೆಸರಿನಲ್ಲಿ ಹೂತು ಹೋಗಿತ್ತು ಎಂದು ತಿಳಿದು ಬಂದಿದೆ.ಅದಕ್ಕೆ ಮೇಲೆ ಏಳಲಾಗದೇ ಒದ್ದಾಟ ನಡೆಸಿ ಅದು ಅಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಊರವರು ಸ್ಥಳಕ್ಕೆ ಧಾವಿಸಿದರು.ಅರಣ್ಯ ಇಲಾಖೆಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ರೇಂಜರ್ ಮಂಜುನಾಥ್, ಪಶು ಇಲಾಖಾಧಿಕಾರಿ ಡಾ.ನಿತೀನ್ ಪ್ರಭು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು.