ನ್ಯೂಸ್ ನಾಟೌಟ್: ಕರಾವಳಿಯ ಜೀವನದಿ ನೇತ್ರಾವತಿಯಲ್ಲಿ ದಿನೇ ದಿನ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದ ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸರಬರಾಜಾಗುತ್ತಿದ್ದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸದ್ಯಕ್ಕೆ ನಗರಕ್ಕೆ ಎರಡು ವಾರಕ್ಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ.
ಈ ಬಾರಿ ಬೇಸಗೆಯಲ್ಲಿ ಮಳೆಯೇ ಸುರಿದಿಲ್ಲ. ಇದರಿಂದಾಗಿ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿದೆ. ಮೇ 5ರಂದು ನೀರಿನ ಪ್ರಮಾಣ 4.10 ಮೀ.ಗೆ ಇಳಿಕೆಯಾಗಿದೆ. ತುಂಬೆ ಕೆಳ ಭಾಗದಲ್ಲಿ ಹೊಸತಾಗಿ ಅಡ್ಯಾರ್ನಲ್ಲಿ ನೀರೆತ್ತುವ ಕೆಲಸ ಆಗುತ್ತಿದೆ. ಆದರೂ ಎರಡು ವಾರಗಳಿಗೆ ಬೇಕಾಗುವಷ್ಟು ಮಾತ್ರ ನೀರಿದೆ.
2016ರಲ್ಲಿಯೂ ಮಂಗಳೂರಿನಲ್ಲಿ ಭೀಕರ ನೀರಿನ ಕೊರತೆ ಉಂಟಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದೆ, ನಗರದಲ್ಲಿ ಟ್ಯಾಂಕರ್ ನೀರು ಪೂರೈಸಲಾಗಿತ್ತು. ಕೊನೆಗೆ ಕುದುರೆಮುಖದ ಲಕ್ಯಾ ಡ್ಯಾಂ ನೀರು ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ 2017ರಲ್ಲಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು. ಇದೀಗ ದಿನ ಬಿಟ್ಟು ದಿನಕ್ಕೆ ನೀರು ಪೂರೈಸುತ್ತಿದ್ದು ಇದರಿಂದ ಎತ್ತರದ ಪ್ರದೇಶಗಳಿಗೆ ನೀರು ತಲುಪುವುದಿಲ್ಲ. ಪೈಪ್ ನಲ್ಲಿ ಗಾಳಿ ತುಂಬುವುದರಿಂದ ಕೆಲವು ಪ್ರದೇಶಕ್ಕೆ ನೀರು ಸರಬರಾಜಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ನೀರಿನ ಸಮಸ್ಯೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ಕಾಲೇಜು ತರಗತಿಗಳಿಗೂ ತಟ್ಟಿದೆ. ಎರಡೂ ಜಿಲ್ಲೆಗಳಲ್ಲಿ ಬಹುತೇಕ ಕಾಲೇಜುಗಳಿಗೆ ನೀರು ಸರಬರಾಜು ಸಮಸ್ಯೆ ಕಾಡುತ್ತಿದೆ. ಹಾಸ್ಟೆಲ್ ಹೊಂದಿರುವ ಕಾಲೇಜುಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಇದೇ ವೇಳೆ, ಕುಡಿಯುವ ನೀರಿನ ಸಮಸ್ಯೆಯಿರುವ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ ಕೆಲವು ಕಾಲೇಜುಗಳ ಸಮಯದಲ್ಲೂ ಕಡಿತಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಕೆಲವು ದಿನದ ಹಿಂದೆ 3 ದಿನ ನೀರಿನ ಪೂರೈಕೆ ಸಗಿತವಾಗಿದ್ದ ಕಾರಣದಿಂದ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಆನ್ಲೈನ್ ತರಗತಿ ನಡೆಸಲಾಗಿತ್ತು. ಬಳಿಕ ಟ್ಯಾಂಕರ್ ನೀರು ತರಿಸಿ ತರಗತಿ ನಡೆಸಲಾಗಿತ್ತು. ಕೆಲವು ಕಾಲೇಜುಗಳಲ್ಲಿ ಸ್ಥಳೀಯಾಡಳಿತದ ನೀರಿನ ವ್ಯವಸ್ಥೆ ಲಭ್ಯವಿಲ್ಲದ ಕಾರಣದಿಂದ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ.