ನ್ಯೂಸ್ ನಾಟೌಟ್:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನಲ್ಲಿ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಿದೆ.ಇದೀಗ ಈ ಟ್ರಸ್ಟ್ ಗೆ ಸುಳ್ಯದ ಶಿಕ್ಷಣ ಇಲಾಖೆ ನೌಕರರೊಬ್ಬರು ಹಣ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಸುಳ್ಯದ ಬಿ.ಇ.ಓ. ಕಚೇರಿಯಲ್ಲಿ ಉದ್ಯೋಗಿ ಆಗಿರುವ ಶಿವ ಪ್ರಸಾದ್ ಕೆ. ವಿ. ಅವರು ಸಮಾಜಮುಖಿ ಕೆಲಸಕ್ಕೆ ಹಣ ನೀಡುವ ಮೂಲಕ ಮಾದರಿ ವ್ಯಕ್ತಿ ಎಂದೆನಿಸಿಕೊಂಡವರು.ಅವರು ತನಗೆ ಸರಕಾರದ ವತಿಯಿಂದ ಮಂಜೂರಾದ 17ಶೇ. ಹೆಚ್ಚುವರಿ ವೇತನ ಖಾತೆಗೆ ಜಮೆ ಆಗಿರುವ ಸಂತಸವನ್ನು ಟ್ರಸ್ಟ್ ಗೆ ಹಣ ಹಸ್ತಾಂತರ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.
ತನ್ನ ಊರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಸೇವೆ ನೀಡುತ್ತಿರುವ ಆ್ಯಂಬುಲೆನ್ಸ್ ಸೇವೆ, ಅಗ್ನಿ ರಕ್ಷಕ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತ ದಾನ ಶಿಬಿರ ಆಯೋಜನೆ, ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಸೇರಿದಂತೆ ಇತರ ಸಮಾಜಮುಖಿ ಕಾರ್ಯಗಳನ್ನು ಮನಗಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ.ತನ್ನಿಂದ ಒಂದಿಷ್ಟು ಸಮಾಜಕ್ಕಾಗಿ ಎಂಬ ಮಾತಿನಂತೆ ತನಗೆ ಬಂದಿರುವ ಹಣದ ಸ್ವಲ್ಪ ಪಾಲನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಮೂಲಕ ಹಸ್ತಾಂತರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೇವಾ ಚಾಲಕರಾದ ರಾಜೇಶ್ ಉತ್ರಂಬೆ ಉಪಸ್ಥಿತರಿದ್ದರು.