ನ್ಯೂಸ್ ನಾಟೌಟ್: ಅಭಿವೃದ್ಧಿ, ಶಿಕ್ಷಣ, ಮೂಲಸೌಕರ್ಯ, ಮತ್ಸ್ಯ ಉತ್ಪಾದನೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವುದು ಬಿಜೆಪಿ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಮೂಲ್ಕಿಯ ಕೊಲ್ನಾಡಿನಲ್ಲಿ ಇಂದು ಬಿಜೆಪಿಯ ಎರಡು ಜಿಲ್ಲೆಗಳ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮೋದಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಕಾಂಗ್ರೆಸ್ನವರು ನಮ್ಮ ನಾಯಕ ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ನಮಗೆ ಮತ ಕೊಡಿ ಎಂದು ಮತ ಭಿಕ್ಷೆ ಕೇಳುತ್ತಿದ್ದಾರೆ. ಆದರೆ ಬಿಜೆಪಿ ಜನರ ಕಲ್ಯಾಣಕ್ಕಾಗಿ ಮತ ಕೇಳುತ್ತಿದೆ. 4 ದಿನಗಳಿಂದ ಕರ್ನಾಟಕದಲ್ಲಿ ರ್ಯಾಲಿ ನಡೆಸುತ್ತಿದ್ದೇನೆ. ಮಕ್ಕಳ ಪ್ರೀತಿ, ಹಿರಿಯರ ಆಶೀರ್ವಾದ ಕಂಡು ಬೆರಗಾಗಿದ್ದಾನೆ. ಅದರೊಂದಿಗೆ ನನಗೆ ಬಿಜೆಪಿಯೊಂದಿಗೆ ಜನರು ಇರುವುದು ದೃಢಪಟ್ಟಿದೆ ಎಂದರು.
ಶಿಕ್ಷಣದಲ್ಲಿ ಉಡುಪಿ, ದಕ್ಷಿಣ ಕನ್ನಡದ ಮಕ್ಕಳ ಸಾಧನೆ ಯಾವಾಗಲೂ ಮುಂದಿದೆ. ಟಾಪರ್ಗಳು ಅವರೇ ಆಗಿರುತ್ತಾರೆ. ಕರ್ನಾಟಕವನ್ನು ಔದ್ಯೋಗಿಕ ವಲಯದಲ್ಲಿ ನಂಬರ್ ಒನ್ ಮಾಡಬೇಕಿದೆ. ಕೃಷಿಯಲ್ಲಿ ನಂಬರ್ ಒನ್ ಆಗಬೇಕಿದೆ. ಪೋರ್ಟ್, ಮೀನುಗಾರಿಕೆಯಲ್ಲಿ ನಂಬರ್ ಒನ್ ಮಾಡಲು ಬಿಜೆಪಿ ಸರ್ಕಾರ ಬರಬೇಕು. ವಿಕಾಸದ ಪ್ರತಿ ಕ್ಷೇತ್ರದಲ್ಲಿ ನಂಬರ್ ಒನ್ ಆಗಿ ಮಾಡಲಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರ್ನಾಟಕ ದಿಲ್ಲಿ ನಾಯಕರ ಎಟಿಎಂ ಆಗಿತ್ತು. ಪ್ರತಿ ಯೋಜನೆಯಲ್ಲಿ 85 ಪರ್ಸೆಂಟ್ ಕಮಿಷನ್ ಇತ್ತು. ಮೊದಲ ಬಾರಿ ವೋಟ್ ಮಾಡುವ ಸ್ನೇಹಿತ ಸಹೋದರ ಸಹೋದರಿಯರು ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಿದೆ. ಕಾಂಗ್ರೆಸ್ ಶಾಂತಿ, ವಿಕಾಸದ ಶತ್ರು, ಆತಂಕವಾದಿಗಳನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಬಾಂಬ್ ದಾಳಿ ಸೂತ್ರಧಾರಿಗಳನ್ನು ರಾಜಸ್ಥಾನದಲ್ಲಿ ಜೈಲಿನಿಂದ ಬಿಡುಗಡೆಗೊಳಿಸಿ ರಕ್ಷಿಸಿದೆ. ಅದೇ ರೀತಿ ಕರ್ನಾಟಕ ಆಗಬೇಕೇ ಎಂದು ಯೋಚಿಸಿ. ಕರ್ನಾಟಕದಲ್ಲಿ ಉಗ್ರವಾದಿಗಳನ್ನು ಪೊಲೀಸರು ಬಂಧಿಸಿದರೆ ಅವರನ್ನು ಅಮಾಯಕರೆಂದು ಕಾಂಗ್ರೆಸ್ ಹೇಳುತ್ತದೆ. ರಾಷ್ಟ್ರ ವಿರೋಧಿಗಳೊಂದಿಗೆ ಚುನಾವಣೆಯಲ್ಲಿ ಕೈಜೋಡಿಸಿದೆ. ಸೈನಿಕರಿಗೆ ಕಾಂಗ್ರೆಸ್ ಅವಮಾನ ಮಾಡುತ್ತದೆ. ಸೇನಾ ವರಿಷ್ಠರನ್ನು ಅವಮಾನಿಸುತ್ತದೆ. ಪ್ರಪಂಚದಲ್ಲಿ ಆಡಳಿತ, ಅಭಿವೃದ್ಧಿ ಬಗ್ಗೆ ವಿಶ್ವವೇ ಪ್ರಶಂಸಿಸುತ್ತದೆ. ಆದರೆ ವಿದೇಶಕ್ಕೆ ಹೋಗಿ ನಮ್ಮ ದೇಶವನ್ನು ಅವಮಾನ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಭಾಷಣದ ಕೊನೆಯಲ್ಲಿ ಮೋದಿ ಕಾರ್ಯಕರ್ತರಲ್ಲಿ ನನಗೊಂದು ವೈಯಕ್ತಿಕ ಸಹಾಯ ಮಾಡುವಿರಾ ಎಂದು ಕೇಳಿದಾಗ ಸಭಿಕರೆಲ್ಲ ಕೈ ಎತ್ತಿ ಹೋ ಎಂದು ವಾಗ್ದಾನ ಮಾಡಿದರು. ನಿಮ್ಮ ಬೂತಿನ ಪ್ರತಿ ಮನೆಗೆ ಹೋಗಿ ಮೋದಿ ನಿಮಗೆ ನಮಸ್ಕಾರ ತಿಳಿಸಿದ್ದಾರೆ. ನಿಮ್ಮ ಆಶೀರ್ವಾದ ಬಯಸಿದ್ದಾರೆ ಎಂದು ಹೇಳಬೇಕು. ನಿಮಗೆ ಪ್ರಣಾಮಗಳನ್ನು ಅರ್ಪಿಸಿದ್ದಾರೆ ಎಂದು ತಿಳಿಸಬೇಕು ಎಂದರು. ಸಭಿಕರು ಕ್ಷಣ ಹೊತ್ತು ಮೌನವಾದಾಗ ನಿಮ್ಮ ಮೊಬೈಲ್ನ ಫ್ಲಾಶ್ ಲೈಟ್ ಹೊತ್ತಿಸಿ ವಾಗ್ದಾನ ನೀಡಿ ಎಂದು ಮೋದಿ ಹೇಳಿದಾಗ ಇಡೀ ಸಭಾಂಗಣ ಫ್ಲಾಶ್ ಲೈಟಿನಿಂದ ಬೆಳಗಿತು.
ಮೋದಿಗೆ ಬಿಜೆಪಿ ನಾಯಕರು ಕರಾವಳಿಯ ಪ್ರಮುಖ ದೇವಸ್ಥಾನಗಳ ಪ್ರಸಾದ ಮತ್ತು ವಿಗ್ರಹಗಳನ್ನು ನೀಡಿದರು. ಉಡುಪಿಯ ಜನತೆ ಪರವಾಗಿ ಕೃಷ್ಣನ ವಿಗ್ರಹ ಮತ್ತು ಪ್ರಸಾದ, ಬೆಳ್ತಂಗಡಿಯ ಜನತೆಯ ಪರವಾಗಿ ಡಾ. ವೀರೇಂದ್ರ ಹೆಗ್ಗಡೆಯವರು ಕಳುಹಿಸಿಕೊಟ್ಟ ಪ್ರಸಾದ, ಕಟೀಲಿನ ದೇವಿಯ ವಿಗ್ರಹ ಮತ್ತು ಪ್ರಸಾದ, ಮೂಲ್ಕಿ ವೆಂಕಟರಮಣ ದೇವರ ಪ್ರಸಾದ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ವಿಗ್ರಹ ಮತ್ತು ಮತ್ತು ಪ್ರಸಾದವನ್ನು ಆಯಾಯ ಕ್ಷೇತ್ರದ ಅಭ್ಯರ್ಥಿಗಳು ನೀಡಿದರು.