ನ್ಯೂಸ್ ನಾಟೌಟ್ ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿದೆ. ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್ನ ಪ್ರಣಾಳಿಕೆ ಹತಾಶೆಯಿಂದ ಕೂಡಿದೆ. ಕಾಂಗ್ರೆಸ್ ಜೇನು ಗೂಡಿಗೆ ಕಲ್ಲು ಎಸೆಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತ್ತಡ್ಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಮ ಮಂದಿರ ಹೋರಾಟದಿಂದ ಹುಟ್ಟಿಕೊಂಡಿರುವ ಬಜರಂಗದಳವನ್ನು ಕೆರಳಿಸುವ ಕಾರ್ಯಕ್ಕೆ ಕೈಹಾಕಿದೆ. ಅಲ್ಲದೆ ಕೋವಿಡ್ ಸಮಯದಲ್ಲಿ ಬಜರಂಗದಳದ ಕಾರ್ಯಕರ್ತರು ತಮ್ಮ ಮನೆ ಮಠಗಳನ್ನು ಬಿಟ್ಟು ಯಾವುದೇ ಫಲಾಪೇಕ್ಷೆ ರಹಿತವಾಗಿ ಜನರ ಆರೋಗ್ಯ ಕಾಪಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ನಿರ್ಧಾರಕ್ಕೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ. ಇದು ಕಾಂಗ್ರೆಸ್ ಅವನತಿಯನ್ನು ಸೂಚಿಸುತ್ತದೆ ಎಂದರು.
ಮುಸ್ಲಿಂ ಓಟ್ಬ್ಯಾಂಕ್ಗಾಗಿ ಕಾಂಗ್ರೆಸ್ ಈ ರೀತಿಯ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನವರಿಗೆ ತಾಕತ್ತಿದ್ದರೆ ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಬಹಿರಂಗವಾಗಿ ಯಾವುದೇ ವೇದಿಕೆಯಲ್ಲಿ ಹೇಳಲಿ. ಅದಕ್ಕೆ ಸರಿಯಾದ ಉತ್ತರ ನಾವು ಚುನಾವಣೆಯಲ್ಲಿ ನೀಡಲಿದ್ದೇವೆ ಎಂದು ಸವಾಲೆಸೆದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಶತಸಿದ್ಧರಾಗಿದ್ದೇವೆ ಎಂದರು.
ಬಜರಂಗ ದಳ, ವಿಶ್ವ ಹಿಂದು ಪರಿಷತ್ ಮುಖಂಡರಾದ ಡಾ. ಕೃಷ್ಣ ಪ್ರಸನ್ನ, ಶ್ರೀಧರ ತೆಂಕಿಲ, ಜನಾರ್ದನ ಬೆಟ್ಟ, ಹರೀಶ್ ಕುಮಾರ್ ದೋಲ್ಪಾಡಿ ಸುದ್ದಿಗೋಷ್ಠಿಯಲ್ಲಿದ್ದರು.